ಹೈದರಾಬಾದ್:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ದೆಹಲಿ ಹಜ್ ಸಮಿತಿ ಮತ್ತು ಅಖಿಲ ಭಾರತ ಮುಸ್ಲಿಂ ಜಮಾತ್ ಸೇರಿದಂತೆ ಹಲವು ಇಸ್ಲಾಮಿಕ್ ಸಂಘಟನೆಗಳು ಸ್ವಾಗತಿಸಿವೆ. ಸಿಎಎಯಿಂದ ಭಾರತದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿವೆ.
2019ರಲ್ಲಿ ಅಂಗೀಕರಿಸಲಾದ ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳನ್ನು ಕೇಂದ್ರ ಗೃಹ ಸಚಿವಾಲಯವು ಸೋಮವಾರ ಅನುಷ್ಠಾನಗೊಳಿಸಿತು. ಇದರ ವಿರುದ್ಧ ಅಸ್ಸೋಂ, ಪಶ್ಚಿಮಬಂಗಾಳದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಇದನ್ನು ಟೀಕಿಸಿವೆ. ಆದರೆ, ಇಸ್ಲಾಮಿಕ್ ಸಂಘಟನೆಗಳು ಸಿಎಎ ಜಾರಿಯನ್ನು ಶ್ಲಾಘಿಸಿವೆ. ಈ ಕಾಯ್ದೆಯನ್ನು ಹಿಂದೆಯೇ ಜಾರಿಗೆ ತರಬೇಕಿತ್ತು. ತಡವಾಗಿಯಾದರೂ ದೇಶದಲ್ಲಿ ಜಾರಿಗೆ ಬಂದಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿವೆ.
ಪೌರತ್ವ ನೀಡುತ್ತದೆ ಕಸಿಯಲ್ಲ:ದೆಹಲಿ ಹಜ್ ಸಮಿತಿಯ ಅಧ್ಯಕ್ಷ ಕೌಸರ್ ಜಹಾನ್ ಮಾತನಾಡಿ, ಸಿಎಎ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ಬದಲಿಗೆ ನಾಗರಿಕತ್ವವನ್ನು ನೀಡುತ್ತದೆ. ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ನೆರೆಯ ದೇಶಗಳಲ್ಲಿ ಕಿರುಕುಳಕ್ಕೀಡಾದ ಮುಸ್ಲಿಮೇತರರು ಭಾರತದಲ್ಲಿ ಬಂದು ನೆಲೆಸಿದಲ್ಲಿ ಅವರಿಗೆ ಪೌರತ್ವ ಸಿಗಲಿದೆ. ಇದರಿಂದ ದೇಶದ ಮುಸ್ಲಿಮರಿಗೆ ಯಾವುದೇ ಸಮಸ್ಯೆ ಇಲ್ಲ. ಗಾಬರಿಯಾಗುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ನೂ, ಸಿಎಎ ಅಧಿಸೂಚನೆಯನ್ನು ಸ್ವಾಗತಿಸಿದ ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು, ಕೇಂದ್ರ ಸರ್ಕಾರವು ಸಿಎಎ ಕಾನೂನನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹ. ಇದು ಬಹಳ ಹಿಂದೆಯೇ ಜಾರಿ ಮಾಡಬೇಕಿತ್ತು. ಈ ಕಾನೂನಿಗೆ ಸಂಬಂಧಿಸಿದಂತೆ ಮುಸ್ಲಿಮರಲ್ಲಿ ಸಾಕಷ್ಟು ತಪ್ಪು ತಿಳುವಳಿಕೆಗಳಿವೆ. ಈ ಕಾನೂನಿಗೂ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ ಎಂದು ವಿವರಿಸಿದ್ದಾರೆ.
ಸಿಎಎ ಬಗ್ಗೆ ಹೆದರಿಕೆ ಬೇಡ:ಈ ಹಿಂದೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧರ್ಮದ ಆಧಾರದ ಮೇಲೆ ದೌರ್ಜನ್ಯಕ್ಕೀಡಾದ ಮುಸ್ಲಿಮೇತರರಿಗೆ ಪೌರತ್ವ ನೀಡಲು ಯಾವುದೇ ಕಾನೂನು ಇರಲಿಲ್ಲ. ಇದನ್ನು ಹೋಗಲಾಡಿಸಲು ಈ ಕಾನೂನನ್ನು ಜಾರಿಗೆ ತರಲಾಗಿದೆ. ಭಾರತೀಯ ಮುಸ್ಲಿಮರು ಈ ಕಾನೂನಿನಿಂದ ಯಾವುದೇ ಪರಿಣಾಮ ಎದುರಿಸುವುದಿಲ್ಲ. ವಿನಾಕಾರಣ ಯಾವುದೇ ಹೆದರಿಕೆ ಬೇಡ ಎಂದು ಅವರು ಹೇಳಿದ್ದಾರೆ.
ಈ ಕಾನೂನು ಭಾರತೀಯ ಮುಸಲ್ಮಾನನ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ತಪ್ಪು ತಿಳಿವಳಿಕೆಯಿಂದ ಈ ಕಾನೂನು ವಿರುದ್ಧ ಈ ಹಿಂದೆ ಪ್ರತಿಭಟನೆಗಳು ನಡೆದಿವೆ. ರಾಜಕೀಯ ನಾಯಕರು ಮುಸ್ಲಿಮರಲ್ಲಿ ತಪ್ಪು ತಿಳುವಳಿಕೆಯನ್ನು ಬಿತ್ತಿದ್ದಾರೆ. ಪ್ರತಿಯೊಬ್ಬ ಮುಸ್ಲಿಮರು ಸಿಎಎಯನ್ನು ಸ್ವಾಗತಿಸಬೇಕು ಎಂದು ಬರೇಲ್ವಿ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಪೌರತ್ವ ತಿದ್ದಪಡಿ ಕಾಯ್ದೆ ಜಾರಿಗೊಳಿಸಿದ ಕೇಂದ್ರ ಸರ್ಕಾರ