ಕರ್ನಾಟಕ

karnataka

ETV Bharat / bharat

ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ದೂರು ನೀಡಿದ ಇಡಿ - Delhi excise scam

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನೀಡಿರುವ ಐದು ಸಮನ್ಸ್‌ಗಳಿಗೂ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಸಿಎಂ ಕೇಜ್ರಿವಾಲ್ ವಿರುದ್ಧ ಇ.ಡಿ ನ್ಯಾಯಾಲಯಕ್ಕೆ ದೂರು ನೀಡಿದೆ.

KEJRIWAL
KEJRIWAL

By PTI

Published : Feb 4, 2024, 8:28 AM IST

ನವದೆಹಲಿ:ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಕುರಿತಂತೆ ಐದು ಬಾರಿ ಸಮನ್ಸ್ ನೀಡಿದರೂ ತನ್ನ ಮುಂದೆ ಹಾಜರಾಗದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ ಇಲ್ಲಿನ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.

ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರಿಗೆ ದೂರು ಸಲ್ಲಿಸಲಾಗಿದೆ. ಸೆಕ್ಷನ್ 50, ಮನಿ ಲಾಂಡರಿಂಗ್ ತಡೆ ಕಾಯಿದೆ 2002ರ ಅಡಿ ವಿಚಾರಣೆಗೆ ಹಾಜರಾಗದಿರುವ ಕಾರಣ ಇ.ಡಿ ಹೊಸ ದೂರು ದಾಖಲಿಸಿದೆ. ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದ್ದಾರೆ.

"ಇ.ಡಿ ಉಳಿದ ದಾಖಲೆಗಳನ್ನು ಸಲ್ಲಿಸಲು ಫೆಬ್ರವರಿ 7ರಂದು ದಿನ ನಿಗದಿಪಡಿಸಲಾಗಿದೆ" ಎಂದು ನ್ಯಾಯಾಧೀಶರು ಹೇಳಿದ್ದಾರೆ. ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್‌ಗೆ ಇಡಿ 5ನೇ ಸಮನ್ಸ್ ನೀಡಿತ್ತು. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ನಾಲ್ಕು ಸಮನ್ಸ್‌ ನೀಡಲಾಗಿತ್ತು. ಒಟ್ಟು ಐದು ಸಮನ್ಸ್​ಗಳಿಗೂ ಕೇಜ್ರಿವಾಲ್ ಪ್ರತಿಕ್ರಿಯಿಸಿಲ್ಲ.

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಕೇಜ್ರಿವಾಲ್, ಈ ಹಿಂದೆ ಇ.ಡಿ ನೀಡಿದ ಸಮನ್ಸ್‌ಗಳನ್ನು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಜರಿದಿದ್ದರು. ಚುನಾವಣೆಯ ಪ್ರಚಾರಕ್ಕೆ ಬರದಂತೆ ತಡೆಯುವ ಉದ್ದೇಶದಿಂದಲೇ ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದೂ ಎಎಪಿ ಆರೋಪಿಸಿತ್ತು.

ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಎಎಪಿಯ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ದೆಹಲಿ ಪೊಲೀಸರಿಂದ ಕೇಜ್ರಿವಾಲ್‌ಗೆ ನೋಟಿಸ್: ಐದು ಗಂಟೆಗಳ ಕಾಲ ನಡೆದ ನಾಟಕಿಯ ವಿದ್ಯಮಾನದ ಬಳಿಕ ದೆಹಲಿ ಪೊಲೀಸರ ಅಪರಾಧ ವಿಭಾಗದ ಅಧಿಕಾರಿಗಳು ಶನಿವಾರ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಬಿಜೆಪಿ ಏಳು ಎಎಪಿ ಶಾಸಕರನ್ನು ಬೇಟೆಯಾಡಲು ಪ್ರಯತ್ನಿಸಿದೆ ಎಂಬ ಅವರ ಆರೋಪದ ಕುರಿತ ತನಿಖೆಗೆ ಮೂರು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಲಾಗಿದೆ.

ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು, "ನಾವು ಅವರಿಗೆ (ಕೇಜ್ರಿವಾಲ್) ನೋಟಿಸ್ ನೀಡಿದ್ದೇವೆ. ಅವರು ಲಿಖಿತ ರೂಪದಲ್ಲಿ ಮೂರು ದಿನಗಳಲ್ಲಿ ಉತ್ತರ ನೀಡಬಹುದು" ಎಂದು ಹೇಳಿದರು. ಬಿಜೆಪಿ ಸಂಪರ್ಕಿಸಿದೆ ಎಂದು ಹೇಳಲಾದ ಎಎಪಿ ಶಾಸಕರ ಹೆಸರನ್ನು ಬಹಿರಂಗಪಡಿಸುವಂತೆ ಕ್ರೈಂ ಬ್ರಾಂಚ್ ಕೇಜ್ರಿವಾಲ್‌ರನ್ನು ಕೇಳಿದೆ.

ಇದಕ್ಕೂ ಮೊದಲು, ಸಿವಿಲ್ ಲೈನ್ಸ್‌ನಲ್ಲಿರುವ ಕೇಜ್ರಿವಾಲ್ ನಿವಾಸದಲ್ಲಿ ಶನಿವಾರ ನಾಟಕೀಯ ಘಟನೆ ನಡೆಯಿತು. ತನಿಖೆಗೆ ಸಂಬಂಧಿಸಿದಂತೆ ನೋಟಿಸ್ ನೀಡಲು ಅಪರಾಧ ವಿಭಾಗದ ತಂಡ ಆಗಮಿಸಿತ್ತು. ತಮ್ಮ ನಿವಾಸದಲ್ಲಿದ್ದ ಕೆಲವು ಪೊಲೀಸರ ವಿಡಿಯೋವನ್ನು ಹಂಚಿಕೊಂಡ ಕೇಜ್ರಿವಾಲ್, ತನಗೆ ನೋಟಿಸ್ ನೀಡಲು ಕಳುಹಿಸಲಾದ ಪೊಲೀಸ್ ಅಧಿಕಾರಿಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿ, "ದೆಹಲಿಯಲ್ಲಿ ಅಪರಾಧಗಳನ್ನು ತಡೆಯುವುದು ಅವರ ಕರ್ತವ್ಯ. ಆದರೆ, ಅವರನ್ನು ಈ ನಾಟಕದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ'' ಎಂದು ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಕಳೆದ ವಾರ, ಕೇಜ್ರಿವಾಲ್ ಅವರು ತಮ್ಮ ಸರ್ಕಾರವನ್ನು ಉರುಳಿಸುವ ಸಲುವಾಗಿ ಪಕ್ಷ ತೊರೆಯಲು ಏಳು ಎಎಪಿ ಶಾಸಕರಿಗೆ ತಲಾ 25 ಕೋಟಿ ರೂ.ಗಳನ್ನು ಬಿಜೆಪಿ ನೀಡಿದೆ ಎಂದು ಎಕ್ಸ್‌ ಖಾತೆಯಲ್ಲಿ ಆರೋಪಿಸಿದ್ದರು. ದೆಹಲಿ ಸಚಿವ ಅತಿಶಿ ಪತ್ರಿಕಾಗೋಷ್ಠಿ ನಡೆಸಿ, ''ಬಿಜೆಪಿ ಆಪರೇಷನ್ ಕಮಲ 2.0 ಆರಂಭಿಸಿದೆ. ಅವರು ಕಳೆದ ವರ್ಷವೂ ಎಎಪಿ ಶಾಸಕರಿಗೆ ಹಣ ನೀಡುವ ಮೂಲಕ ಬೇಟೆಯಾಡಲು ಇದೇ ರೀತಿಯ ಪ್ರಯತ್ನ ಮಾಡಿದ್ದರು. ಆದರೆ, ಅದು ವಿಫಲವಾಗಿತ್ತು" ಎಂದು ಗಂಭೀರ ಆರೋಪ ಮಾಡಿದ್ದರು.

ಈ ಆರೋಪದ ನಂತರ, ದೆಹಲಿ ಬಿಜೆಪಿಯ ಮುಖ್ಯಸ್ಥ ವೀರೇಂದ್ರ ಸಚ್‌ದೇವ ನೇತೃತ್ವದ ನಿಯೋಗವು ಜನವರಿ 30ರಂದು ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರನ್ನು ಭೇಟಿ ಮಾಡಿ, ತನಿಖೆ ನಡೆಸುವಂತೆ ಒತ್ತಾಯಿಸಿತ್ತು.

ಕೇಜ್ರಿವಾಲ್ ಬಂಧನ ಆದ್ಯತೆಯಲ್ಲ- ಕೇಂದ್ರ ಸಚಿವ ರೂಪಾಲಾ:''ಅರವಿಂದ್ ಕೇಜ್ರಿವಾಲ್ ಅವರ ಬಂಧನ ಎಂದಿಗೂ ಆದ್ಯತೆ ಅಥವಾ ಗುರಿಯಲ್ಲ'' ಎಂದು ಕೇಂದ್ರ ಸಚಿವ ಪುರುಷೋತ್ತಮ್ ರೂಪಾಲಾ ಶನಿವಾರ ಲೂಧಿಯಾನದಲ್ಲಿ ಹೇಳಿದ್ದಾರೆ. ಇಲ್ಲಿನ ಜಾಗರಾನ್‌ನಲ್ಲಿ ಪ್ರಗತಿಪರ ಡೈರಿ ರೈತರ ಸಂಘ ಆಯೋಜಿಸಿದ್ದ ಅಂತಾರಾಷ್ಟ್ರೀಯ ಡೈರಿ ಮತ್ತು ಅಗ್ರಿ ಎಕ್ಸ್‌ಪೋ 2024ರಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ''ಜಾರಿ ನಿರ್ದೇಶನಾಲಯ ಕೇಜ್ರಿವಾಲ್‌ಗೆ ಸಮನ್ಸ್ ಜಾರಿ ಮಾಡಿದ್ದು, ತನಿಖೆಗೆ ಸಹಕರಿಸುವಂತೆ ಕೇಳಿಕೊಂಡಿದೆ. ಆದರೆ, ಅವರು ಸಹಕರಿಸುತ್ತಿಲ್ಲ'' ಎಂದರು.

''ಇ.ಡಿ ಕಾನೂನು ವಿಧಾನವನ್ನು ಅನುಸರಿಸುತ್ತಿದೆ. ಸಂವಿಧಾನ ಮತ್ತು ಕಾನೂನಿನಲ್ಲಿ ನಂಬಿಕೆ ಇರುವ ಜನರು ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸಬೇಕು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್‌ಗೆ ಇಡಿ ಐದನೇ ಸಮನ್ಸ್ ಜಾರಿ ಮಾಡಿದೆ. ಆದ್ರೆ, ಕೇಜ್ರಿವಾಲ್‌ ಪ್ರತಿಕ್ರಿಯಿಸಿಲ್ಲ'' ಎಂದು ಅವರು ತಿಳಿಸಿದರು.

ಇದನ್ನೂ ಓದಿ:ಉತ್ತರ ಪ್ರದೇಶ: 27 ವರ್ಷದ ನ್ಯಾಯಾಧೀಶೆ ಶವವಾಗಿ ಪತ್ತೆ

ABOUT THE AUTHOR

...view details