ನವದೆಹಲಿ: ಬಹು ವಿವಾದಿತ ಹಾಗೂ ಚರ್ಚಿತ ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ರಾಷ್ಟ್ರೀಯ ಸಂಚಾಲಕ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ. ತಿಹಾರ್ ಜೈಲಿನಲ್ಲಿರುವ ಸಿಎಂಗೆ 1 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಇಡುವಂತೆ ಸೂಚಿಸಿರುವ ಕೋರ್ಟ್, ನಿರ್ದಿಷ್ಟ ಷರತ್ತುಗಳನ್ನೂ ವಿಧಿಸಿದೆ.
ಪ್ರಕರಣವೇನು?: ಹೊಸ ಅಬಕಾರಿ ನೀತಿಯನ್ನು ಕೇಜ್ರಿವಾಲ್ ನೇತೃತ್ವದ ಸರ್ಕಾರ ತರಲು ಮುಂದಾಗಿತ್ತು. ಬಳಿಕ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ನೀತಿಯನ್ನು ರದ್ದುಪಡಿಸಲಾಗಿದೆ. ಆದರೆ, ಈ ಪ್ರಕರಣದಲ್ಲಿ ಸಿಬಿಐ, ಜಾರಿ ನಿರ್ದೇಶನಾಲಯದ ತನಿಖೆ ಮುಂದುವರೆದಿದೆ. ಇದು ಸಿಎಂ, ಡಿಸಿಎಂ ಅವರಿಂದ ಹಿಡಿದು ಪ್ರಮುಖ ಆಪ್ ನಾಯಕರು, ಉದ್ಯಮಿಗಳು, ಆಂಧ್ರ, ತೆಲಂಗಾಣದ ರಾಜಕಾರಣಿಗಳಿಗೂ ಉರುಳಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಮಾರ್ಚ್ 21ರಂದು ಇಡಿ ಅಧಿಕಾರಿಗಳು ಖುದ್ದು ದೆಹಲಿ ಸಿಎಂ ಕೇಜ್ರಿವಾಲ್ ಅವರನ್ನು ಬಂಧಿಸಿದ್ದರು. ನಂತರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಚುನಾವಣಾ ಪ್ರಚಾರಕ್ಕೆಂದು ಮೇ 10ರಂದು ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಇದರ ಅವಧಿಯು ಜೂನ್ 2ರಂದು ಮುಗಿದಿತ್ತು. ಹೀಗಾಗಿ ಅವರು ಮರಳಿ ಜೈಲಿಗೆ ಶರಣಾಗಿದ್ದರು.