ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ತಿಳಿಸಿದೆ. ಕಳೆದ ನಾಲ್ಕು ತಿಂಗಳಲ್ಲಿ ಇಡಿ ಅಧಿಕಾರಿಗಳು ಕೇಜ್ರಿವಾಲ್ ಅವರಿಗೆ ನಾಲ್ಕು ಸಮನ್ಸ್ ಜಾರಿ ಮಾಡಿದ್ದರು. ಬುಧವಾರ ಐದನೇ ಸಮನ್ಸ್ ಜಾರಿ ಮಾಡಲಾಗಿತ್ತು.
ಆದರೆ ಕೇಜ್ರಿವಾಲ್ ಇಡಿ ಮುಂದೆ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ. ಸಮನ್ಸ್ "ಕಾನೂನುಬಾಹಿರ" ಎಂದಿರುವ ಆಪ್, ಕೇಜ್ರಿವಾಲ್ ಅವರನ್ನು ಬಂಧಿಸಲು ಪದೇ ಪದೇ ನೋಟಿಸ್ ಕಳುಹಿಸಲಾಗುತ್ತಿದೆ ಎಂದು ಆರೋಪಿಸಿದೆ.
ಕೇಜ್ರಿವಾಲ್‌ರನ್ನು ಬಂಧಿಸುವ ಮೂಲಕ ದೆಹಲಿಯಲ್ಲಿ ತನ್ನ ಸರ್ಕಾರ ಉರುಳಿಸಲು ಬಿಜೆಪಿ ಬಯಸಿದೆ. ಎಎಪಿ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಆಪ್ ಹೇಳಿದೆ. ಈ ಮಧ್ಯೆ ಕೇಜ್ರಿವಾಲ್ ಇಂದು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಎಎಪಿ ನಡೆಸುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ.