ಕೋಲ್ಕತ್ತಾ (ಪಶ್ಚಿಮ ಬಂಗಾಳ): ರೆಮಲ್ ಚಂಡಮಾರುತ ಇಲ್ಲಿನ ಕರಾವಳಿಗೆ ಅಪ್ಪಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಪ್ರಸ್ತುತ, ಚಂಡಮಾರುತ ಕರಾವಳಿ ಪ್ರದೇಶದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಕರಾವಳಿಗೆ ಚಂಡಮಾರುತ ಕೆಲ ಗಂಟೆಗಳಲ್ಲೇ ಅಪ್ಪಳಿಸಲಿದೆ. ಚಂಡಮಾರುತ ಪ್ರಸ್ತುತ ಗಂಟೆಗೆ 135 ಕಿ.ಮೀ ವೇಗ ಹೊಂದಿದೆ. ಮುಂದಿನ ಆರು ಗಂಟೆಗಳಲ್ಲಿ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಕರಾವಳಿಯಲ್ಲಿ ಭಾರೀ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರೆಮಲ್ ಚಂಡಮಾರುತ ಅಪ್ಪಳಿಸುವಿಕೆಯನ್ನು ಗಮನದಲ್ಲಿಟ್ಟುಕೊಂಡು ರಕ್ಷಣಾ ಕಾರ್ಯಾಚರಣೆ ನಡೆಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಒಟ್ಟು 14 ತಂಡಗಳನ್ನು ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾಗಿದೆ ಎಂದು ಎನ್ಡಿಆರ್ಎಫ್ ತಿಳಿಸಿದೆ.
ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ಈ ಕುರಿತು ಪ್ರತಿಕ್ರಿಯಿಸಿ, ರಾಜಭವನವು ರಮೆಲ್ ಚಂಡಮಾರುತದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಇದಲ್ಲದೆ, ಅಗತ್ಯವಿದ್ದರೆ ರಾಜಭವನದಲ್ಲಿ ವಿಪತ್ತಿನಿಂದ ಬಾಧಿತರಾದ ಜನರಿಗೆ ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರೆಮಲ್ ಚಂಡಮಾರುತದಿಂದಾಗಿ ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಟವನ್ನು 21 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ. ಭಾನುವಾರ ಮಧ್ಯಾಹ್ನ 12:00 ರಿಂದ ಮೇ 27 (ಸೋಮವಾರ) ಬೆಳಗ್ಗೆ 9:00ರ ವರೆಗೆ ಯಾವುದೇ ವಿಮಾನಗಳು ಹಾರಾಟ ಮಾಡುವುದಿಲ್ಲ. ಕೋಲ್ಕತ್ತಾ ವಿಮಾನ ನಿಲ್ದಾಣ ಪ್ರಾಧಿಕಾರ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇದರಿಂದ ಸುಮಾರು 50 ಸಾವಿರ ಪ್ರಯಾಣಿಕರು ಪರದಾಡುವಂತಾಗಿದೆ.
ರೆಮಲ್ ಚಂಡಮಾರುತ ಹಿನ್ನೆಲೆ ಕರಾವಳಿ ಪ್ರದೇಶದ ಸುಮಾರು 1 ಲಕ್ಷದ 10 ಸಾವಿರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಚಂಡಮಾರುತದಿಂದಾಗಿ ಕಾಜಿ ನಜ್ರುಲ್ ಇಸ್ಲಾಂ ಮೆಟ್ರೋ ನಿಲ್ದಾಣದ ಮೇಲ್ಛಾವಣಿ ಕುಸಿದಿದೆ.
ಅಮಿತ್ ಶಾ ಪೋಸ್ಟ್; "ರೆಮಲ್ ಚಂಡಮಾರುತದ ಕುರಿತು ನಾನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಚಂಡಮಾರುತದಿಂದ ಪ್ರಭಾವ ಹೊಂದಿರುವ ಎಲ್ಲಾ ಪ್ರದೇಶಗಳಲ್ಲಿ ಎನ್ಡಿಆರ್ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಮತ್ತು ವಿಪತ್ತುಗಳನ್ನು ಎದುರಿಸಲು ಮೋದಿ ಸರ್ಕಾರ ಬದ್ಧವಾಗಿದೆ" ಎಂದು ಗೃಹ ಸಚಿವ ಅಮಿತ್ ಶಾ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ: ಜೂನ್ 6 ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ - Karnataka Rain Forecast