ಕರ್ನಾಟಕ

karnataka

ETV Bharat / bharat

ರೆಮಲ್ ಚಂಡಮಾರುತ: ತೆಲಂಗಾಣದಲ್ಲಿ ಭಾರಿ ಮಳೆಗೆ 13 ಮಂದಿ ಸಾವು - Cyclone Remal - CYCLONE REMAL

13 people killed in Telangana: ಭಾನುವಾರ ಬೀಸಿದ ಚಂಡಮಾರುತ ಮತ್ತು ಭಾರಿ ಮಳೆಗೆ ತೆಲಂಗಾಣದಲ್ಲಿ 13 ಜನರ ಮೃತಪಟ್ಟಿದ್ದಾರೆ. ಹಲವೆಡೆ ಮನೆಗಳು ಕುಸಿದಿವೆ. ಭಾರಿ ಗಾಳಿಗೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ.

Cyclone Remal: Heavy rain claims lives of 13 people in Telangana
ತೆಲಂಗಾಣದಲ್ಲಿ ಭಾರೀ ಮಳೆ (ETV Bharat)

By ETV Bharat Karnataka Team

Published : May 27, 2024, 3:30 PM IST

ತೆಲಂಗಾಣ (ಹೈದರಾಬಾದ್):ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ರೆಮಲ್ ಚಂಡಮಾರುತದ ಪರಿಣಾಮ ತೆಲಂಗಾಣದ ಹಲವೆಡೆ ಭಾನುವಾರ ರಾತ್ರಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 13 ಜನರು ಮೃತಪಟ್ಟಿದ್ದಾರೆ.

ರಾಜ್ಯ ರಾಜಧಾನಿ ಹೈದರಾಬಾದ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸುರಿದ ಭಾರಿ ಬಿರುಗಾಳಿ ಸಹಿತ ಮಳೆ ಅಪಾರ ಹಾನಿಯನ್ನುಂಟು ಮಾಡಿವೆ. ರೆಮಲ್ ಚಂಡಮಾರುತ ಭಾನುವಾರ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿ ನಡುವೆ ಅಪ್ಪಳಿಸಿದ್ದು, ತೆಲಂಗಾಣದಲ್ಲಿ 13 ಜೀವಗಳನ್ನು ಬಲಿ ಪಡೆದಿದೆ.

ಕೋಳಿ ಶೆಡ್ ಕುಸಿದು ನಾಲ್ವರ ಸಾವು: ಹೈದರಾಬಾದ್‌ನ ವನಸ್ಥಲಿಪುರಂ ಗಣೇಶ ದೇವಸ್ಥಾನದ ಕೆನರಾ ಬ್ಯಾಂಕ್ ರಸ್ತೆಯಲ್ಲಿ ಕಾರು ಮತ್ತು ಆಟೋ ಮೇಲೆ ಮರ ಬಿದ್ದಿದೆ. ಹಯತ್‌ನಗರ, ಎಲ್‌ಬಿ ನಗರ, ಅಂಬರಪೇಟ್, ಕಾಚಿಗುಡ, ನಲ್ಲಕುಂಟಾ, ಉಪ್ಪಲ್, ನಾಗೋಲ್, ಮನ್ಸೂರಾಬಾದ್, ಮಲ್ಕಾಜಿಗಿರಿ, ತುರ್ಕಯಾಂಜಲ್ ಸೇರಿದಂತೆ ಹಲವೆಡೆ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಾಗರ್ಕರ್ನೂಲ್ ಜಿಲ್ಲೆಯೊಂದರಲ್ಲೇ ಪ್ರತ್ಯೇಕ ಘಟನೆಗಳಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ತಾಂಡೂರ್ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಕೋಳಿ ಶೆಡ್ ಕುಸಿದು ಒಂದೇ ಕುಟುಂಬದ ತಂದೆ, ಮಗಳು ಸೇರಿ ನಾಲ್ವರು, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ರೈತ ಮಲ್ಲೇಶ್ (38), ಅವರ ಪುತ್ರಿ ಅನುಷಾ (12), ಕಟ್ಟಡ ಕಾರ್ಮಿಕರಾದ ಚೆನ್ನಮ್ಮ (38) ಮತ್ತು ರಾಮುಡು (36) ಕೋಳಿ ಶೆಡ್ ಕುಸಿದು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಪ್ರತ್ಯೇಕ ಅಪಘಾತಗಳಲ್ಲಿ ರಾಜಧಾನಿ ಹೈದರಾಬಾದ್‌ನಲ್ಲಿ ನಾಲ್ವರು ಮತ್ತು ಮೇಡಕ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ಹಲವು ಜಿಲ್ಲೆಗಳಲ್ಲಿ ಭಾರಿ ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಗಂಟೆಗಟ್ಟಲೆ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು. ರಭಸವಾಗಿ ಬೀಸಿದ ಗಾಳಿಯಿಂದಾಗಿ ಮನೆ ಹಾಗೂ ರಸ್ತೆಗಳಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ನಾಗರಕರ್ನೂಲ್ ಜಿಲ್ಲೆಯಲ್ಲಿಯೇ ಭಾರಿ ಮಳೆಯಾಗಿದೆ. ರಂಗಾರೆಡ್ಡಿ ಮತ್ತು ಮೇಡ್ಚಲ್ ಮಲ್ಕಾಜ್ ಗಿರಿ ಜಿಲ್ಲೆಯ ಹಲವೆಡೆ ಬಿರುಗಾಳಿ ಬೀಸಿದೆ. ನಲ್ಗೊಂಡ ಜಿಲ್ಲೆಯ ಘನಪುರ, ಇಬ್ರಾಹಿಂ ಪೇಟೆ, ಗುರ್ರಂಪೋಡು ಮಂಡಲ ಕೇಂದ್ರಗಳಲ್ಲಿ ಅಪಾರ ಪ್ರಮಾಣದ ನೀರು ರಸ್ತೆಯಲ್ಲಿ ನಿಂತಿದೆ.

ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತೀವ್ರತೆ: ಮತ್ತೊಂದೆಡೆ, ಭಾನುವಾರ ರಾಜ್ಯದಲ್ಲಿ ತಾಪಮಾನ 46.5 ಡಿಗ್ರಿ ಗಡಿ ಮುಟ್ಟಿದೆ. ಜಗಿತ್ಯಾಲ ಜಿಲ್ಲೆಯ ಧರ್ಮಪುರಿ ಮಂಡಲದಲ್ಲಿ 46.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬುದ್ದೇಪಲ್ಲಿ ಮಂಡಲದಲ್ಲಿ 46.1 ಡಿಗ್ರಿ, ಬೆಳ್ಳಂಪಲ್ಲಿ ಜಿಲ್ಲೆಯಲ್ಲಿ 45.8, ಪೆದ್ದಪಲ್ಲಿ ಜಿಲ್ಲೆಯಲ್ಲಿ 45.8, ಐಲಾಪುರದಲ್ಲಿ 45.6, ಧರ್ಮಪುರಿ ಮಂಡಲದಲ್ಲಿ 45.6, ಮಂಚಿರ್ಯಾಲ ಜಿಲ್ಲೆಯಯಲ್ಲಿ 45.2, ಭೀಮಪುರ ಮಂಡಲದ ಅರಳಿಯಲ್ಲಿ 45.2, ಪೆದ್ದಪಲ್ಲಿ ಜಿಲ್ಲೆಯ ಲಿಂಗಾಪುರದಲ್ಲಿ 45.2, ಲಪಲ್ಲಿ ಮಂಡಲ ಕೇಂದ್ರದಲ್ಲಿ 45.1, ಜನ್ನಾರಂ ಮಂಡಲ ಕೇಂದ್ರದಲ್ಲಿ 45, ನಿರ್ಮಲ್ ಜಿಲ್ಲಾ ಕೇಂದ್ರದಲ್ಲಿ 45, ಜನ್ನಾರಂ ಮಂಡಲ ತಪಾಲಪುರದಲ್ಲಿ 45 ಡಿಗ್ರಿ. ಇನ್ನು ಕೆಲವು ಜಿಲ್ಲೆಗಳಲ್ಲಿ 44.8 ರಿಂದ 44.9 ಡಿಗ್ರಿ ವರೆಗೆ ದಾಖಲಾಗಿದೆ. ಹವಾಮಾನ ಇಲಾಖೆ ಪ್ರಕಾರ ಸೋಮವಾರ ಮತ್ತು ಮಂಗಳವಾರ ರಾಜ್ಯದಲ್ಲಿ ಒಣ ಹವೆ ಇರುತ್ತದೆ.

ಇದನ್ನೂ ಓದಿ: ರಾಜ್ಯದಲ್ಲಿ 24 ಗಂಟೆಗಳಲ್ಲಿ 51 ಸಾವು: ಸುರಕ್ಷಿತ ವಾಹನ ಚಾಲನೆಗೆ ಎಡಿಜಿಪಿ ಅಲೋಕ್ ಕುಮಾರ್ ಸಲಹೆ - ADGP Alok Kumar

ABOUT THE AUTHOR

...view details