ಅಮೇಥಿ/ಪ್ರತಾಪಗಢ( ಉತ್ತರಪ್ರದೇಶ): ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ್ ಯಾತ್ರೆ ಉತ್ತರಪ್ರದೇಶದಲ್ಲಿ ಸಂಚರಿಸುತ್ತಿದೆ. ಇಂದು ಬೆಳಗ್ಗೆ 9 ಗಂಟೆಗೆ ಪ್ರಯಾಗ್‌ರಾಜ್ ಮೂಲಕ ಪ್ರತಾಪ್‌ಗಢ ಜಿಲ್ಲೆಯನ್ನು ಪ್ರವೇಶಿಸಲಿದೆ. ಇನ್ನು ಎಸ್ಪಿ ನಾಯಕ ಅಖಿಲೇಶ್ ಯಾದವ್ ಇಂದು ರಾಹುಲ್ಗೆ ಸಾಥ್ ನೀಡಲಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ನ್ಯಾಯ ಯಾತ್ರೆ ಉತ್ತರ ಪ್ರದೇಶ ಕಾಂಗ್ರೆಸ್ಸಿಗರಲ್ಲಿ ಭಾರಿ ಹುಮ್ಮಸ್ಸು ತಂದಿದೆ. ನಗರದ ವಿವಿಧೆಡೆ ರಾಹುಲ್ ಗಾಂಧಿ ಅವರ ಹೋರ್ಡಿಂಗ್ಸ್ಗಳನ್ನು ಹಾಕಲಾಗಿದ್ದು, ಸ್ವಾಗತಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ ಯಾತ್ರೆ ಲಾಲ್‌ಗಂಜ್ ಮೂಲಕ ತಮ್ಮ ಕ್ಷೇತ್ರವಾಗಿದ್ದ ಅಮೇಥಿಗೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ನಾಲ್ಕು ದಿನಗಳ ಅಮೇಥಿಗೆ ಭೇಟಿ ನೀಡಲಿದ್ದಾರೆ. ಅಮೇಥಿ ನಂತರ ರಾಹುಲ್ ಗಾಂಧಿಯವರ ನ್ಯಾಯ ಯಾತ್ರೆ ರಾಯ್ ಬರೇಲಿಗೆ ಸಾಗಲಿದೆ.
ಪ್ರಯಾಗರಾಜ್‌ನಲ್ಲಿ ರಾಹುಲ್ ಮಿಂಚು: ನ್ಯಾಯ ಯಾತ್ರೆ ಭಾನುವಾರ ಪ್ರಯಾಗ್‌ರಾಜ್‌ಗೆ ತಲುಪಿತ್ತು. ಸ್ವರಾಜ್ ಭವನದಿಂದ ಆರಂಭವಾದ ಯಾತ್ರೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಬೆಂಬಲಿಗರು ಜಮಾಯಿಸಿದ್ದರು. ಸಂಸದ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ದೇಶದಲ್ಲಿ ಶೇ.73ರಷ್ಟು ಜನರಿಗೆ ಹಕ್ಕುಗಳೇ ಸಿಗುತ್ತಿಲ್ಲ. ಮೋದಿ ಸರ್ಕಾರ ಬಡವರ ಹಣವನ್ನು ಕಿತ್ತು ಶ್ರೀಮಂತರಿಗೆ ನೀಡುತ್ತಿದೆ ಎಂದು ಹರಿಹಾಯ್ದರು.
ಕಳೆದ ಶುಕ್ರವಾರ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಚಂದೌಲಿ ಜಿಲ್ಲೆಯ ಮೂಲಕ ಉತ್ತರಪ್ರದೇಶವನ್ನು ಪ್ರವೇಶಿಸಿತ್ತು. ಚಂದೌಲಿ ಮೂಲಕ ವಾರಾಣಸಿ, ಪ್ರಯಾಗ್‌ರಾಜ್, ಇಂದು ಪ್ರತಾಪಗಢ ಜಿಲ್ಲೆಗೂ ತಲುಪಿದೆ. ಅಮೇಥಿ ನಂತರ ರಾಯ್ ಬರೇಲಿಗೆ ಯಾತ್ರೆ ಸಾಗಲಿದೆ. ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿಗೆ ಸಾಥ್ ನೀಡಲಿದ್ದಾರೆ. ಇನ್ನೊಂದು ಕಡೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೋಮವಾರ ಅಮೇಥಿ ಪ್ರವಾಸ ಕೈಗೊಂಡಿದ್ದಾರೆ.