ಮುಂಬೈ(ಮಹಾರಾಷ್ಟ್ರ):ಕಾಂಗ್ರೆಸ್ ಒಂದು ಬೇಜವಾಬ್ದಾರಿ ಪಕ್ಷ. ಹಿಂದೂಗಳನ್ನು ವಿಭಜಿಸಲು ಮತ್ತು ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟಿ ದ್ವೇಷ ಹರಡುವ ಕಾರ್ಖಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಟೀಕಿಸಿದ್ದಾರೆ.
ಮಹಾರಾಷ್ಟ್ರದಲ್ಲಿಂದು ಸುಮಾರು 7,600 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಹಿಂದು ಸಮಾಜವನ್ನು ಒಡೆಯುತ್ತಿದೆ. ಜಾತಿ-ಜಾತಿಗಳ ಮಧ್ಯೆ ದ್ವೇಷ ಹರಡುತ್ತಿದೆ. ಸಮಾಜ ಹೆಚ್ಚು ಇಬ್ಭಾಗವಾದಷ್ಟು ತನಗೆ ಲಾಭ ಎಂದುಕೊಂಡಿದೆ. ದೇಶದಲ್ಲಿ ಎಲ್ಲೇ ಚುನಾವಣೆ ನಡೆದರೂ, ಕಾಂಗ್ರೆಸ್ ಇದೇ ನೀತಿಯನ್ನು ಅನುಸರಿಸುತ್ತದೆ ಎಂದು ಆರೋಪಿಸಿದರು.
ದಲಿತರ ಮೀಸಲಾತಿ ಕಸಿಯುವ ಯತ್ನ:ದಲಿತರು, ರೈತರು, ಯುವಕರು ಸೇರಿದಂತೆ ಎಲ್ಲ ವರ್ಗವನ್ನು ದಾರಿತಪ್ಪಿಸಲು ಕಾಂಗ್ರೆಸ್ ಪ್ರಯತ್ನಿಸಿದೆ. ಆದರೆ, ಈ ಎಲ್ಲ ಯತ್ನಗಳೂ ವಿಫಲವಾಗಿವೆ. ಕಾಂಗ್ರೆಸ್‌ನ ನಗರ ನಕ್ಸಲರ ಗುಂಪಿನ ಪಿತೂರಿಗಳನ್ನು ಜನರು ಗ್ರಹಿಸಿದ್ದಾರೆ. ದಲಿತ ಸಮುದಾಯದ ಮೀಸಲಾತಿಯನ್ನು ಕಸಿದುಕೊಳ್ಳುವ ಮೂಲಕ ತನ್ನ 'ಓಲೈಕೆ ಮತಬ್ಯಾಂಕ್'ಗೆ ನೀಡಲು ಬಯಸುತ್ತಿದೆ ಎಂದರು.