ನವದೆಹಲಿ: ಸಂಸತ್ತಿನಲ್ಲಿ ಎನ್‌ಡಿಎಯನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್, ಬಿಹಾರ ಮತ್ತು ಆಂಧ್ರಪ್ರದೇಶದ ರಾಜ್ಯಗಳಿಗೆ ವಿಶೇಷ ಸ್ಥಾನಮಾನದ ವಿಷಯದಲ್ಲಿ ಬಿಜೆಪಿ ಮಿತ್ರಪಕ್ಷಗಳಾದ ಟಿಡಿಪಿ, ಜೆಡಿಯು ಪಕ್ಷವನ್ನು ಹಣಿಯಲು ಮುಂದಾಗಿದೆ.
ಎರಡು ರಾಜ್ಯಗಳಿಗೆ ವಿಶೇಷ ಸ್ಥಾನಮಾನದ ವಿಷಯವು ಕಳೆದ ಹಲವಾರು ವರ್ಷಗಳಿಂದ ಚರ್ಚಿಸಲ್ಪಟ್ಟಿದೆ. ಆದರೆ, ಜೆಡಿಯು ಮತ್ತು ಟಿಡಿಪಿ ಎರಡೂ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಪ್ರಮುಖ ಪಾಲುದಾರರಾದ ನಂತರ ರಾಜಕೀಯ ಮಹತ್ವವನ್ನು ಪಡೆದುಕೊಂಡಿದೆ. ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಬಿಹಾರದಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದರೆ, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೆ ಬಂದಿದೆ.
ಕಾಂಗ್ರೆಸ್ ಒಳಗಿನವರ ಪ್ರಕಾರ, ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ವಿಷಯವನ್ನು ಸಂಸತ್ತಿನಲ್ಲಿ ಮತ್ತು ಆಯಾ ರಾಜ್ಯಗಳಲ್ಲಿ ಪಕ್ಷದ ಘಟಕವು ಎತ್ತಲಿದೆ. ಅಲ್ಲದೇ, ಜುಲೈನಲ್ಲಿ ಕೇಂದ್ರ ಬಜೆಟ್ 2024-25 ಮಂಡನೆಗೆ ಮುಂಚಿತವಾಗಿ ಎರಡು ಎನ್‌ಡಿಎ ಪಾಲುದಾರ ಪಕ್ಷಗಳು ಮತ್ತು ಬಿಜೆಪಿಯನ್ನು ಸಾರ್ವಜನಿಕವಾಗಿ ಇಕ್ಕಟ್ಟಿಗೆ ಸಿಲುಕಿಸಲು ನಿರ್ಧರಿಸಿದೆ.
ನಿತೀಶ್ ಕುಮಾರ್ ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬಗ್ಗೆ ದೀರ್ಘಕಾಲ ಮಾತನಾಡುತ್ತಿದ್ದಾರೆ. ಈಗ ಅವರು ಎನ್‌ಡಿಎಯ ಪ್ರಮುಖ ಭಾಗವಾಗಿದ್ದಾರೆ. ಅವರು ನಿಜವಾಗಿಯೂ ಬಿಜೆಪಿ ಅಧಿಕಾರದಲ್ಲಿ ಉಳಿಯಲು ಸಹಾಯ ಮಾಡುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಇದು ಅತ್ಯಂತ ಅನುಕೂಲಕರ ಸಮಯ. ನಿತೀಶ್ ಕುಮಾರ್ ಸರ್ಕಾರ ಇದಕ್ಕಾಗಿ ಕ್ಯಾಬಿನೆಟ್ ನಿರ್ಣಯವನ್ನು ಅಂಗೀಕರಿಸಬೇಕು ಮತ್ತು ಅದನ್ನು ಕೇಂದ್ರಕ್ಕೆ ಆದಷ್ಟು ಬೇಗ ಕಳುಹಿಸಬೇಕು. ಈ ವಿಷಯವನ್ನು ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಯಲ್ಲೂ ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ ಎಂದು ಬಿಹಾರದ ಸಸಾರಾಮ್‌ನ ಕಾಂಗ್ರೆಸ್ ಸಂಸದ ಮನೋಜ್ ಕುಮಾರ್ 'ಈಟಿವಿ ಭಾರತ್'ಗೆ ತಿಳಿಸಿದರು.