ನವದೆಹಲಿ:ಕಾಂಗ್ರೆಸ್ನ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಿದ್ದು, ಚುನಾವಣೆಗೆ ಪ್ರಚಾರ ನಡೆಸಲು ಸಾಧ್ಯವಾಗುತ್ತಿಲ್ಲ. ಚುನಾವಣಾ ಬಾಂಡ್ಗಳಿಂದ ಬಿಜೆಪಿ ಕೋಟ್ಯಂತರ ರೂಪಾಯಿ ಹಣ ಪಡೆದಿದೆ. ಇತ್ತ ನಮ್ಮ ಬ್ಯಾಂಕ್ ಅಕೌಂಟ್ಗಳನ್ನು ಮುಟ್ಟುಗೋಲು ಹಾಕಿರುವುದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ತೆರಿಗೆ ವಂಚನೆ ಪ್ರಕರಣದಲ್ಲಿ ಸರ್ಕಾರ ಪಕ್ಷದ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಿದ್ದರ ವಿರುದ್ಧ ಸೋನಿಯಾ, ರಾಹುಲ್ ಗಾಂಧಿ ಜೊತೆ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಖರ್ಗೆ ಅವರು, ಕಾಂಗ್ರೆಸ್ ಅನ್ನು ಮುಗಿಸಲು ಕೇಂದ್ರ ಸರ್ಕಾರ ವ್ಯವಸ್ಥಿತ ಸಂಚು ರೂಪಿಸಿದೆ. ದೇಶದ ಶೇಕಡಾ 20ರಷ್ಟು ಜನರು ಪಕ್ಷಕ್ಕೆ ಮತ ಹಾಕುತ್ತಾರೆ. ಅವರ ಪ್ರತಿನಿಧಿಯಾದ ಕಾಂಗ್ರೆಸ್ ಪಕ್ಷವನ್ನು ತುಳಿಯುತ್ತಿರುವುದು ಅನ್ಯಾಯ ಎಂದರು.
ಚುನಾವಣಾ ಬಾಂಡ್ಗಳಿಂದ ಬಿಜೆಪಿಯ ಖಜಾನೆ ತುಂಬಿದೆ. ಶೇಕಡಾ 56 ರಷ್ಟು ಹಣವನ್ನು ಬಾಂಡ್ಗಳಿಂದಲೇ ಬಿಜೆಪಿ ಪಡೆದಿದೆ. ಶೇಕಡಾ 11 ರಷ್ಟು ಹಣ ಕಾಂಗ್ರೆಸ್ ಪಕ್ಷಕ್ಕೆ ಬಾಂಡ್ನಿಂದ ಬಂದಿದೆ. ಜನರ ಹಣ ಬಳಸಿಕೊಂಡು ಬಿಜೆಪಿ ಚುನಾವಣೆ ನಡೆಸುತ್ತಿದೆ. ವಿಪಕ್ಷಗಳನ್ನು ವ್ಯವಸ್ಥಿತವಾಗಿ ಮುಗಿಸಲು ಸಂಚು ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಆದಷ್ಟು ಬೇಗ ಖಾತೆಗಳನ್ನು ರಿಲೀಸ್ ಮಾಡಬೇಕು ಎಂದು ಆಗ್ರಹಿಸಿದರು.
ಚುನಾವಣಾ ಬಾಂಡ್ಗಳ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ಆದಷ್ಟು ಬೇಗ ಕೋರ್ಟ್ ಆದೇಶ ನೀಡಬೇಕು. ಕೇಂದ್ರ ಸರ್ಕಾರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿ ಯಾವುದೇ ತೆರಿಗೆ ಕಟ್ಟುತ್ತಿಲ್ಲ. ಕಾಂಗ್ರೆಸ್ ವಿರುದ್ಧ ಮಾತ್ರ ಕ್ರಮ ಜರುಗಿಸಲಾಗಿದೆ ಎಂದು ಆರೋಪಿಸಿದರು.