ನವದೆಹಲಿ:ದೇಶದಲ್ಲಿ 1984ರ ನಂತರ 10 ಲೋಕಸಭೆ ಚುನಾವಣೆಗಳು ನಡೆದಿವೆ. ಆದರೆ, ಒಮ್ಮೆಯೂ ಕಾಂಗ್ರೆಸ್ 250ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಅಲ್ಲದೇ, ಕಳೆದ ಮೂರು ಚುನಾವಣೆಯಲ್ಲಿ 100 ಸ್ಥಾನ ಕೂಡ ದಾಟಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಮಾತ್ರ ಪಡೆದಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು.
ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತಾ ಪ್ರಧಾನಿ ಮೋದಿ, ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ಮಾಡಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಪಡೆದಿರುವುದು ನನಗೆ ಒಂದು ಮಗುವಿನ ನೆನಪಿಗೆ ತರುತ್ತದೆ. ಆ ಮಗು ತಾನು 99 ಅಂಕಗಳನ್ನು ಪಡೆದಿದ್ದೇನೆ ಎಂದು ಎಲ್ಲರಿಗೂ ಹೇಳುತ್ತಿದ್ದಾಗ, ಶಿಕ್ಷಕರು ಆ ಮಗುವಿಗೆ 543 ರಲ್ಲಿ 99 ಅಂಕಗಳನ್ನು ಪಡೆದಿರುವರೆ, 100ಕ್ಕೆ 99 ಅಂಕ ಅಲ್ಲ ಎಂದಿದ್ದರು. ಅದೂ, ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಆ ಮಗು ವಿಫಲವಾಗಿದೆ ಎಂದು ಕುಟುಕಿದರು.
ಮುಂದುವರೆದು, ಲೋಕಸಭೆ ಚುನಾವಣೆ ಜತೆಗೆ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯೂ ನಡೆದಿದೆ. ಈ ಎಲ್ಲ ರಾಜ್ಯಗಳಲ್ಲಿ ಎನ್‌ಡಿಎ ಅಭೂತಪೂರ್ವ ಯಶಸ್ಸು ಕಂಡಿದೆ. ಜಗನ್ನಾಥನ ನಾಡು ಒಡಿಶಾದಲ್ಲಿ ನಾವು ಆಶೀರ್ವಾದ ಪಡೆದಿದ್ದೇವೆ. ಆಂಧ್ರಪ್ರದೇಶದಲ್ಲಿ ಎನ್‌ಡಿಎ ಕ್ಲೀನ್ ಸ್ವೀಪ್ ಮಾಡಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಎನ್‌ಡಿಎ ಮತ್ತೊಮ್ಮೆ ಸರ್ಕಾರ ರಚಿಸಿದೆ ಎಂದು ಹೇಳಿದರು.
ಎನ್‌ಡಿಎಗೆ ಈ ಸಲದ ಅಧಿಕಾರ ಐತಿಹಾಸಿಕ:ನಾನು ಅದನ್ನು ಮೊದಲೇ ಹೇಳಿದ್ದೇನೆ ಮತ್ತು ನಾನು ಮತ್ತೆ ಹೇಳುತ್ತಿದ್ದೇನೆ. ನಮ್ಮ ಮೂರನೇ ಅವಧಿ ಎಂದರೆ ನಾವು ಮೂರು ಪಟ್ಟು ವೇಗದಲ್ಲಿ ಕೆಲಸ ಮಾಡುತ್ತೇವೆ. ನಮ್ಮ ಮೂರನೇ ಅವಧಿ ಎಂದರೆ ನಾವು ಮೂರು ಪಟ್ಟು ಶಕ್ತಿಯನ್ನು ಬಳಸುತ್ತೇವೆ. ನಮ್ಮ ಮೂರನೇ ಅವಧಿ ಎಂದರೆ ನಾವು ಮೂರು ಪಟ್ಟು ಫಲಿತಾಂಶವನ್ನು ತರುತ್ತೇವೆ. ಎನ್‌ಡಿಎ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಅದೃಷ್ಟವು 60 ವರ್ಷಗಳ ನಂತರ ಎರಡನೇ ಬಾರಿಗೆ ಘಟಿಸಿದೆ ಎಂದು ಮೋದಿ ತಿಳಿಸಿದರು.
ಇದೇ ವೇಳೆ, ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ಸೇರಿ ಮೂರು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಪಡೆದ ಮತಗಳಿಂತ ಈ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆದಿದ್ದೇವೆ. ಪಂಜಾಬ್‌ನಲ್ಲಿಯೂ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಆದರೆ, ನೀವು ನಕಲಿ ವಿಜಯೋತ್ಸವ ಆಚರಿಸುವ ಮೂಲಕ ಜನಾದೇಶವನ್ನು ಹತ್ತಿಕ್ಕಬೇಡಿ ಎಂದು ನಾನು ಕಾಂಗ್ರೆಸ್ಸಿನವರೆಗೆ ಹೇಳಲು ಬಯಸುತ್ತೇನೆ ಎಂದು ಮೋದಿ ಹೇಳಿದರು.