ನವದೆಹಲಿ: ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಗೃಹ ಸಚಿವಾಲಯವು ದೇಶಾದ್ಯಂತ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಿದೆ. ಖರ್ಗೆ ಅವರಿಗೆ ಬೆದರಿಕೆ ಇರುವ ಬಗ್ಗೆ ಗ್ರಹಿಕೆಯ ಆಧರಿಸಿ ಈ ತಿಂಗಳ ಆರಂಭದಲ್ಲಿ ಈ ಉನ್ನತ ಶ್ರೇಣಿಯ ಭದ್ರತೆ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
ದೇಶಾದ್ಯಂತ ಖರ್ಗೆ ಅವರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಕಮಾಂಡೋಗಳು ಝಡ್ ಪ್ಲಸ್ ಭದ್ರತೆಯನ್ನು ಒದಗಿಸಲಿದ್ದಾರೆ. ಪ್ರಧಾನ ಪ್ರತಿಪಕ್ಷದ ಅಧ್ಯಕ್ಷರಾಗಿ ಖರ್ಗೆ ಅವರು ಸಾರ್ವತ್ರಿಕ ಚುನಾವಣೆಗಳ ಪೂರ್ವಭಾವಿಯಾಗಿ ಮತ್ತು ಚುನಾವಣಾ ಸಮಯದಲ್ಲಿ ವ್ಯಾಪಕವಾಗಿ ದೇಶಾದ್ಯಂತ ಪ್ರವಾಸ ಮಾಡುವ ನಿರೀಕ್ಷೆಯಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಅವರ ಭದ್ರತೆಯನ್ನು ಹೆಚ್ಚಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ಖರ್ಗೆ ಅವರು ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದು, ಪ್ರತಿಪಕ್ಷದ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಖರ್ಗೆ ಅವರು ಸುಮಾರು 30 ಸಿಆರ್‌ಪಿಎಫ್ ಕಮಾಂಡೋಗಳಿಂದ ದಿನದ ಮೂರು ಪಾಳಿಗಳಲ್ಲಿ ಸುತ್ತಿನ ಭದ್ರತಾ ವ್ಯವಸ್ಥೆ ಹೊಂದಿರಲಿದ್ದಾರೆ. ಜೊತೆಗೆ ಬುಲೆಟ್ ಪ್ರೂಫ್ ವಾಹನ, ಪೈಲಟ್ ಮತ್ತು ಎಸ್ಕಾರ್ಟ್ ಅವರ ಭದ್ರತೆ ಇರಲಿದೆ. ಝಡ್ ಪ್ಲಸ್ ಭದ್ರತೆಯು ದೇಶದಲ್ಲಿ ಹೆಚ್ಚಿನ ಬೆದರಿಕೆ ಗ್ರಹಿಕೆ ಹೊಂದಿರುವ ಗಣ್ಯರಿಗೆ ಒದಗಿಸಲಾದ ಅತ್ಯುನ್ನತ ಶ್ರೇಣಿಯ ಭದ್ರತೆಯಾಗಿದೆ.