ಕರ್ನಾಟಕ

karnataka

ETV Bharat / bharat

'ಚುನಾವಣಾ ಸ್ಪರ್ಧೆ ಹೊಸತು, ಜನಪರ ಹೋರಾಟವಲ್ಲ': ವಯನಾಡ್​ ಜನರಿಗೆ ಪ್ರಿಯಾಂಕಾ ಪತ್ರ

ವಯನಾಡ್​ ಲೋಕ ಉಪಸಮರದ ಕಾಂಗ್ರೆಸ್​ ಅಭ್ಯರ್ಥಿ ಪ್ರಿಯಾಂಕಾ ವಾದ್ರಾ ಅವರು ತಮ್ಮನ್ನು ಗೆಲ್ಲಿಸುವಂತೆ ಕೋರಿ ವಯನಾಡು ಜನರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ವಯನಾಡ್​ ಜನರಿಗೆ ಪ್ರಿಯಾಂಕಾ ಪತ್ರ
ವಯನಾಡ್​ ಜನರಿಗೆ ಪ್ರಿಯಾಂಕಾ ಪತ್ರ (ETV Bharat)

By ETV Bharat Karnataka Team

Published : 4 hours ago

ವಯನಾಡ್​ (ಕೇರಳ):ವಯನಾಡ್​​ ಲೋಕಸಭೆ ಉಪ ಚುನಾವಣೆಯ ಕಾಂಗ್ರೆಸ್​ ಅಭ್ಯರ್ಥಿಯಾಗಿರುವ ಪ್ರಿಯಾಂಕಾ ವಾದ್ರಾ ಅವರು ಕ್ಷೇತ್ರದ ಜನರಿಗೆ ಭಾವನಾತ್ಮಕ ಬಹಿರಂಗ ಪತ್ರ ಬರೆದಿದ್ದಾರೆ. 'ತನಗೆ ಚುನಾವಣೆ ಹೊಸದು, ಜನರ ಪರವಾಗಿ ಹೋರಾಟ ಮಾಡುವುದು ಹೊಸದೇನಲ್ಲ' ಎಂದು ಅದರಲ್ಲಿ ಹೇಳಿದ್ದಾರೆ.

ಕ್ಷೇತ್ರಕ್ಕೆ ಆಯ್ಕೆ ಬಯಸಿ ಉಮೇದುವಾರಿಕೆ ಸಲ್ಲಿಸಿದ ಬಳಿಕ ಜನರಲ್ಲಿ ಗೆಲುವಿಗಾಗಿ ಮನವಿ ಮಾಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ, "ಪ್ರಜಾಪ್ರಭುತ್ವ, ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳಿಗಾಗಿ ಹೋರಾಡುತ್ತಿದ್ದೇನೆ. ಜನಪ್ರತಿನಿಧಿಯಾಗಿ ಚುನಾವಣಾ ಕಣದಲ್ಲಿ ಸ್ಪರ್ಧಿಸುತ್ತಿರುವ ಈ ಪಯಣ ತಮಗೆ ಹೊಸದು, ಆದರೆ, ಜನರ ಪರವಾಗಿ ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದೇನೆ" ಎಂದಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್​ ಖಾತೆಯಲ್ಲಿ ಪತ್ರವನ್ನು ಹಂಚಿಕೊಂಡಿರುವ ಅವರು, "ನವೆಂಬರ್ 13 ರ ಉಪ ಚುನಾವಣೆಯಲ್ಲಿ ನನ್ನನ್ನು ಸಂಸದೆಯನ್ನಾಗಿ ಆಯ್ಕೆ ಮಾಡಿ. ಇದು ನಿಮ್ಮೊಂದಿಗಿನ ಬಾಂಧವ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ವಯನಾಡಿನ ಜನರಿಗೆ ನನ್ನಿಂದ ಸಾಧ್ಯವಾಗುವ ಎಲ್ಲವನ್ನೂ ಮಾಡುತ್ತೇನೆ. ಸಾರ್ವಜನಿಕ ಪ್ರತಿನಿಧಿಯಾಗಿ ನನ್ನ ಮೊದಲ ಪ್ರಯಾಣದಲ್ಲಿ ವಯನಾಡಿನ ಜನರು ಮಾರ್ಗದರ್ಶಿಗಳಾಗಬೇಕು" ಎಂದು ಕೋರಿದ್ದಾರೆ.

ನಿಮ್ಮ ಚೈತನ್ಯವೇ ನನಗೆ ಸ್ಫೂರ್ತಿ:"ಕೆಲವು ತಿಂಗಳ ಹಿಂದೆ ನಡೆದ ಭೂಕುಸಿತದಲ್ಲಿ ಮನೆ- ಪ್ರಾಣ ಕಳೆದುಕೊಂಡ ಜನರು ಮತ್ತೆ ತಮ್ಮ ಬದುಕನ್ನು ಕಟ್ಟಿಕೊಂಡ ರೀತಿಯೇ ನನಗೆ ಸ್ಫೂರ್ತಿ. ಆ ಕರಾಳ ದಿನಗಳಿಂದ ಹೊರಬಂದು ನೀವು ಮುನ್ನಡೆಯುತ್ತಿರುವುದು ಶ್ಲಾಘನೀಯ. ಕೆಲ ದಿನಗಳ ಹಿಂದೆ ನಾನು ಮತ್ತು ಸಹೋದರ ರಾಹುಲ್ ಗಾಂಧಿ ಅವರು ಮಂಡಕ್ಕೈ ಮತ್ತು ಚುರಲ್ಮಲಾಗೆ ಭೇಟಿ ನೀಡಿದ್ದೆವು. ಭೂಕುಸಿತದ ದೃಶ್ಯಗಳನ್ನು ಕಂಡು ವ್ಯಥೆ ಪಟ್ಟಿದ್ದೆವು" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ಸಂಸತ್ತಿನಲ್ಲಿ ವಯನಾಡಿನ ಜನತೆಯನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ನನಗೆ ಗೌರವ ತಂದಿದೆ. ನಿಮ್ಮಿಂದ ಸಾಕಷ್ಟು ಕಲಿತಿದ್ದೇನೆ. ಕಷ್ಟದ ಸಮಯದಲ್ಲಿ ಪರಸ್ಪರ ಗೌರವಿಸುವುದು ಮತ್ತು ಬೆಂಬಲಿಸುವುದು ಹೇಗೆಂಬುದು ತಿಳಿದಿದೆ. ನನ್ನ ಸಹೋದರ ರಾಹುಲ್‌ಗೆ ನೀವು ಅಪಾರ ಪ್ರೀತಿ ಮತ್ತು ಅಭಿಮಾನ ತೋರಿದ್ದೀರಿ. ಅದನ್ನು ನನ್ನ ಮೇಲೂ ತೋರಿಸಿ" ಎಂದು ಮನವಿ ಮಾಡಿದ್ದಾರೆ.

ಕೇರಳದ ವಯನಾಡ್​ ಲೋಕಸಭಾ ಉಪ ಚುನಾವಣಾ ಕಣಕ್ಕೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಅಕ್ಟೋಬರ್​ 23 ರಂದು ನಾಮಪತ್ರ ಸಲ್ಲಿಕೆ ಮಾಡಿದ್ದರು. ನವೆಂಬರ್​ 13ರಂದು ಮತದಾನ ನಡೆಯಲಿದೆ.

ಇದನ್ನೂ ಓದಿ:ವಯನಾಡಿನಲ್ಲಿ ಬೃಹತ್​ ರೋಡ್​ ಶೋ ಬಳಿಕ ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ

ABOUT THE AUTHOR

...view details