ಚಂಡೀಗಢ (ಪಂಜಾಬ್): ಹಲವು ಹತ್ಯೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯನ್ನು ಜೈಲಿನಲ್ಲಿ ಸಂದರ್ಶನ ಮಾಡಲು ಅವಕಾಶ ನೀಡಿದ್ದಕ್ಕೆ ಇಬ್ಬರು ಡಿಎಸ್ಪಿಗಳು ಸೇರಿದಂತೆ 7 ಮಂದಿ ಪೊಲೀಸ್ ಅಧಿಕಾರಿಗಳನ್ನು ಪಂಜಾಬ್ ಸರ್ಕಾರ ಅಮಾನತು ಮಾಡಿದೆ.
ಗುರ್ಶರ್ ಸಿಂಗ್ (ಡಿಎಸ್‌ಪಿ), ಸಮರ್ ವಿನೀತ್ (ಡಿಎಸ್‌ಪಿ), ರೀನಾ (ಎಸ್‌ಐ), ಜಗಪಾಲ್ ಜಂಗು (ಎಸ್‌ಐ), ಶಹಗಿಂತ್ ಸಿಂಗ್ (ಎಸ್‌ಐ), ಮುಕ್ತಿಯಾರ್ ಸಿಂಗ್ (ಎಎಸ್‌ಐ), ಓಂ ಪ್ರಕಾಶ್ (ಹೆಡ್ಕಾನ್ಸ್ಟೇಬಲ್) ಅಮಾನತಾದ ಅಧಿಕಾರಿಗಳು. ಲಾರೆನ್ಸ್ ಬಿಷ್ಣೋಯ್ ಸಂದರ್ಶನಕ್ಕೆ ಸಹಕರಿಸಿದ ಏಳು ಅಧಿಕಾರಿಗಳ ಅಮಾನತಿನ ಆದೇಶವನ್ನು ಪಂಜಾಬ್ ಗೃಹ ಕಾರ್ಯದರ್ಶಿ ಹೊರಡಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿರುವ ಲಾರೆನ್ಸ್ ಬಿಷ್ಣೋಯಿ ಸದ್ಯ ಗುಜರಾತ್ನ ಸಬರಮತಿ ಜೈಲಿನಲ್ಲಿದ್ದಾನೆ. ಇದಕ್ಕೂ ಮೊದಲು ಆತನನ್ನು ಪಂಜಾಬ್ನ ಜೈಲಿನಲ್ಲಿ ಇಡಲಾಗಿತ್ತು. ಈ ವೇಳೆ 2022 ರ ಸೆಪ್ಟೆಂಬರ್ 3 ಮತ್ತು 4 ರಂದು ವಿಡಿಯೋ ಕಾನ್ಫ್ರೆನ್ಸ್ ಮೂಲಕ ಖಾಸಗಿ ವಾಹಿನಿಯೊಂದು ಲಾರೆನ್ಸ್ ಸಂದರ್ಶನ ನಡೆಸಿತ್ತು.
ಬಳಿಕ ಅದನ್ನು 2023 ರ ಮಾರ್ಚ್ನಲ್ಲಿ ಪ್ರಸಾರ ಮಾಡಿತ್ತು. ಬಳಿಕ ಅದರ ವಿಡಿಯೋವನ್ನು ವಾಹಿನಿಯು ಅಳಿಸಿ ಹಾಕಿತ್ತು. ಇದು ದೇಶದಲ್ಲಿ ಭಾರೀ ಸಂಚಲನ ಉಂಟು ಮಾಡಿತ್ತು. ಜೈಲಿನಲ್ಲಿ ಇರುವ ಪಾತಕಿಯನ್ನು ವಾಹಿನಿ ಸಂದರ್ಶನ ನಡೆಸಿದ್ದರ ತನಿಖೆಗೆ ಅಲ್ಲಿನ ಸರ್ಕಾರ ಎಸ್ಐಟಿ ರಚಿಸಿತ್ತು. ವಿಚಾರಣೆಯಲ್ಲಿ ಲಾರೆನ್ಸ್ ವಿಡಿಯೋ ಸಂದರ್ಶನ ನಡೆಸಿದ್ದು, ಪತ್ತೆಯಾಗಿದೆ.
ಜೈಲಿಂದಲೇ ಕೊಲೆಗಳಿಗೆ ಸ್ಕೆಚ್: ಇನ್ನು, ಹಲವಾರು ವರ್ಷಗಳಿಂದ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್, ಇತ್ತೀಚೆಗೆ ನಡೆದ ಎನ್‌ಸಿಪಿ ನಾಯಕ ಬಾಬಾ ಸಿದ್ಧಿಕಿ ಅವರ ಹತ್ಯೆಯ ಹಿಂದಿನ ರೂವಾರಿ ಎಂಬ ಆರೋಪವಿದೆ. ತನ್ನ ಬೆಂಬಲಿಗರ ಜೊತೆ ಜೈಲಿಂದಲೇ ಸಂಪರ್ಕ ಸಾಧಿಸಿ ಕೊಲೆಗೆ ಯೋಜನೆ ರೂಪಿಸುತ್ತಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.
ಅಕ್ರಮವಾಗಿ ತನ್ನ ಬ್ಯಾರಕ್‌ಗೆ ಮೊಬೈಲ್ ತರಿಸಿಕೊಂಡು ತನ್ನ ಅನುಯಾಯಿಗಳೊಂದಿಗೆ ಸಂಪರ್ಕದಲ್ಲಿದ್ದಾನೆ. ಪಂಜಾಬ್ ಗಾಯಕ ಸಿಧು ಮೂಸೆವಾಲಾ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಮೇಲೆ ದಾಳಿಗೆ ಈತನೇ ಸೂಚಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಲವು ಬಾರಿ ಬೆದರಿಕೆ ಹಾಕಿದೆ. ಇತ್ತೀಚೆಗೆ ನಟನ ಮನೆಯ ಮೇಲೆ ಗುಂಡಿನ ದಾಳಿ ನಡೆಸಿತ್ತು. ಇದಾದ ಬಳಿಕ ಖಾನ್ಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಸಾಮಾಜಿಕ ಮಾಧ್ಯಮ ಮತ್ತು ಇಮೇಲ್‌ಗಳ ಮೂಲಕವೂ ಬೆದರಿಕೆಗಳನ್ನು ರವಾನಿಸಲಾಗುತ್ತಿದೆ.
ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಹತ್ಯೆಗೆ ₹1,11,11,111 ಬಹುಮಾನ ಘೋಷಿಸಿದ ಕರ್ಣಿ ಸೇನೆ