ನವದೆಹಲಿ: ಇಲ್ಲಿನ ವಿಕಾಸಪುರಿಯಲ್ಲಿ ನಡೆದ ರ್ಯಾಲಿಯಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ. ಆದರೆ, ಇದನ್ನು ಬಿಜೆಪಿ ನಿರಾಕರಿಸಿದೆ.
ಪಾದಯಾತ್ರೆಯ ವೇಳೆ ಬಿಜೆಪಿ ಕಾರ್ಯಕರ್ತರು ಆಪ್ ಮುಖ್ಯಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ, ದುಷ್ಕರ್ಮಿಗಳ ವಿರುದ್ಧ ದೆಹಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಕಿಡಿಕಾರಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ ಅತಿಶಿ, ಕೆಲವು ಬಿಜೆಪಿ ಕಾರ್ಯಕರ್ತರು ಅರವಿಂದ್ ಕೇಜ್ರಿವಾಲ್ ವಿರುದ್ಧ ಘೋಷಣೆ ಕೂಗಿದರು. ಬಳಿಕ ಹಲ್ಲೆ ನಡೆಸಿದರು. ಕೇಜ್ರಿವಾಲ್ ಅವರನ್ನು ಮುಗಿಸುವ ಪ್ರಯತ್ನ ನಡೆಸಲಾಗಿತ್ತು. ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದಾಗಲೂ, ಅನಾರೋಗ್ಯವಿದ್ದರೂ ಚಿಕಿತ್ಸೆ ನೀಡಲಾಗಿಲ್ಲ. ಈಗ ಅವರ ಮತ್ತೆ ಟಾರ್ಗೆಟ್ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಬಿಜೆಪಿಯೇ ಹೊಣೆ: ಎಎಪಿ ನಾಯಕ ಸಂಜಯ್ ಸಿಂಗ್ ಕೂಡ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, "ಬಿಜೆಪಿಗರು ಅರವಿಂದ್ ಕೇಜ್ರಿವಾಲ್ ಅವರ ಶತ್ರುಗಳಾಗಿದ್ದಾರೆ. ಮೊದಲು ಇಡಿ-ಸಿಬಿಐ ಬಳಸಿ ಸುಳ್ಳು ಕೇಸುಗಳನ್ನು ಹಾಕಿ, ಜೈಲಿಗೆ ಹಾಕಿದರು. ಅವರಿಗೆ ಸಕ್ಕರೆ ಕಾಯಿಲೆ ಇದ್ದರೂ ಇನ್ಸುಲಿನ್ ನಿಲ್ಲಿಸಿ ಹತ್ಯೆಗೆ ಯತ್ನಿಸಿದರು. ಇದೀಗ ಆ ಪಕ್ಷದ ಗೂಂಡಾಗಳು ದಾಳಿ ನಡೆಸಿದ್ದಾರೆ. ಕೇಜ್ರಿವಾಲ್ ಅವರನ್ನು ಮುಗಿಸಲು ಬಿಜೆಪಿ ಬಯಸುತ್ತಿದೆ. ಅರವಿಂದ್ ಕೇಜ್ರಿವಾಲ್‌ಗೆ ಏನಾದರೂ ಸಂಭವಿಸಿದರೆ ಅದಕ್ಕೆ ಬಿಜೆಪಿಯೇ ಹೊಣೆಯಾಗಬೇಕಾಗುತ್ತದೆ" ಎಂದು ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಮೇಲಿನ ದಾಳಿ ಅತ್ಯಂತ ಖಂಡನೀಯ ಮತ್ತು ಆತಂಕಕಾರಿ. ಏನೇ ಆದರೂ, ಪಕ್ಷವು ತನ್ನ ಧ್ಯೇಯ, ಉದ್ದೇಶದ ಹಿಂದೆ ದೃಢವಾಗಿ ನಿಲ್ಲುತ್ತದೆ ಎಂದು ಇನ್ನೊಬ್ಬ ಎಎಪಿ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಹಲ್ಲೆ ಆರೋಪ ಸುಳ್ಳು-ಬಿಜೆಪಿ: ಇನ್ನು, ಆಪ್ ಮಾಡಿರುವ ಆರೋಪವನ್ನು ಬಿಜೆಪಿ ಸುಳ್ಳು ಎಂದಿದೆ. ಪಕ್ಷದ ನಾಯಕರು ಆಧಾರರಹಿತವಾಗಿ ದೂಷಿಸುತ್ತಿದ್ದಾರೆ. ಕೇಜ್ರಿವಾಲ್ ಅವರು ಸಿಎಂ ಆಗಿದ್ದಾಗ, ರಾಜಧಾನಿಗಾಗಿ ಏನೂ ಮಾಡಿಲ್ಲ. ಪಾದಯಾತ್ರೆ ವೇಳೆ ಜನರು ಇದನ್ನು ಪ್ರಶ್ನಿಸುತ್ತಿದ್ದಾರೆ. ಜನರ ಪ್ರಶ್ನೆಗಳಿಗೆ ಹೆದರಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ.
ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣ್ ದಾರಾಲ್ ಮಾತನಾಡಿ, ಕೇಜ್ರಿವಾಲ್ ಅವರ ಪಾದಯಾತ್ರೆಯಲ್ಲಿ ಜನರು ಕಪ್ಪು ಬಾವುಟ ತೋರಿಸಿದ್ದಾರೆ. ಈ ವೇಳೆ ಯುವಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಕೆಲ ಯುವಕರ ಬಟ್ಟೆ ಹರಿದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದರು.
ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರಿಂದ ಅನುಕಂಪ ಗಿಟ್ಟಿಸಿಕೊಳ್ಳಲು, ಕೇಜ್ರಿವಾಲ್ ಹಲ್ಲೆ ನಾಟಕವಾಡುತ್ತಿದ್ದಾರೆ. ಕೇಜ್ರಿವಾಲ್ ಮೇಲಿನ ದಾಳಿ ಎಂದು ಬಿಂಬಿಸುವ ಮೂಲಕ ಸಾರ್ವಜನಿಕರ ಸಹಾನುಭೂತಿ ಗಳಿಸಲು ಪಕ್ಷ ಪ್ರಯತ್ನಿಸುತ್ತಿದೆ. ಅಧಿಕಾರದಲ್ಲಿದ್ದಾಗ ಎಎಪಿ ಸರ್ಕಾರ ಜನರ ನಿರೀಕ್ಷೆಗಳನ್ನು ಕಡೆಗಣಿಸಿದೆ. ಇದೀಗ ಸುಳ್ಳು, ಕುತಂತ್ರ ರೂಪಿಸುತ್ತಿದೆ. ದೆಹಲಿಯ ಜನರು ಈ ತಂತ್ರಗಳಿಗೆ ಮೋಸ ಹೋಗುವುದಿಲ್ಲ ಎಂದು ಬಿಜೆಪಿ ಹೇಳಿದೆ.
ಇದನ್ನೂ ಓದಿ; ಮದುವೆಗೆ ಒತ್ತಾಯಿಸಿದ್ದಕ್ಕೆ 7 ತಿಂಗಳ ಗರ್ಭಿಣಿ ಪ್ರೇಯಸಿ ಕೊಂದು ಹೂತು ಹಾಕಿದ ಪ್ರಿಯತಮ!