ನವದೆಹಲಿ: 'ಗಾಂಧಿ' ಸಿನಿಮಾ ಮಾಡುವುದಕ್ಕೆ ಮುನ್ನ ಪ್ರಪಂಚಕ್ಕೆ ಮಹಾತ್ಮ ಗಾಂಧೀಜಿ ಯಾರೆಂದು ಗೊತ್ತಿರಲಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್ ತೀವ್ರ ಟೀಕಾಸಮರ ನಡೆಸಿದೆ. ಗಾಂಧಿಯನ್ನು ಹತ್ಯೆಗೈದ 'ಸೈದ್ಧಾಂತಿಕ ಪೂರ್ವಜರು' ಗಾಂಧಿ ತೋರಿಸಿದ ಸತ್ಯ ಮಾರ್ಗವನ್ನು ಅನುಸರಿಸಲಾರರು ಎಂದು ಕಟು ಟೀಕೆ ಮಾಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡುತ್ತಾ, "1982ಕ್ಕೂ ಮುನ್ನ ಜಗತ್ತಿಗೆ ಮಹಾತ್ಮ ಗಾಂಧೀಜಿ ಗೊತ್ತಿರಲಿಲ್ಲ ಎಂದು ಅವರು ಹೇಗೆ ಹೇಳುತ್ತಾರೆ? ನಿರ್ಗಮಿತ ಪ್ರಧಾನಿ ಅದು ಯಾವ ಜಗತ್ತಿನಲ್ಲಿ ವಾಸಿಸುತ್ತಿದ್ದಾರೋ ನನಗೆ ತಿಳಿಯದು. ಯಾರಾದರೂ ಗಾಂಧೀಜಿಯ ಕೊಡುಗೆಗಳನ್ನು ನಾಶಪಡಿಸಿದ್ದರೆ ಅದು ಈ ನಿರ್ಗಮಿತ ಪ್ರಧಾನಿ ಮಾತ್ರ" ಎಂದು ಹೇಳಿದರು. "ಇವರದೇ ನೇತೃತ್ವದ ಸರ್ಕಾರ ವಾರಣಾಸಿ, ದೆಹಲಿ ಮತ್ತು ಅಹಮದಾಬಾದ್‌ನಲ್ಲಿ ಗಾಂಧೀಜಿಗೆ ಸಂಬಂಧಿಸಿದ ಸಂಸ್ಥೆಗಳನ್ನು ನಾಶಪಡಿಸಿದೆ" ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, "ನಾಥೂರಾಮ್ ಗೋಡ್ಸೆಯ ಹಿಂಸೆಯ ಹಾದಿಯಲ್ಲಿ ನಡೆಯುವ ಇಂಥ ಜನರಿಗೆ ಗಾಂಧಿ ಅರ್ಥವಾಗಲಾರರು" ಎಂದಿದ್ದಾರೆ.
'ಇಂಥ ಸುಳ್ಳುಗಳು ತನ್ನ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೋಗುವ ಸಮಯ ಬಂದಿದೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಕುರಿತು ವಿಡಿಯೋ ಮಾಡಿರುವ ರಾಹುಲ್ ಗಾಂಧಿ, 'ಶಾಖಾದ(ಆರ್‌ಎಸ್‌ಎಸ್) ದೃಷ್ಟಿಕೋನ ಹೊಂದಿರುವ ಜನರಿಗೆ ಗಾಂಧೀಜಿ ಅರ್ಥವಾಗಲಾರರು. ಅವರು ಗೋಡ್ಸೆ ಮತ್ತು ಗೋಡ್ಸೆ ಹಾದಿಯನ್ನಷ್ಟೇ ಅನುಸರಿಸುತ್ತಾರೆ' ಎಂದು ತಿಳಿಸಿದ್ದಾರೆ. 'ಗಾಂಧೀಜಿ ಇಡೀ ವಿಶ್ವಕ್ಕೆ ಸ್ಫೂರ್ತಿಯ ಸೆಲೆ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಂಡೇಲಾ ಮತ್ತು ಆಲ್ಬರ್ಟ್ ಐನ್‌ಸ್ಟೈನ್‌ರಂಥ ಮಹನೀಯರು ಗಾಂಧಿಯಿಂದ ಪ್ರೇರಣೆಗೊಂಡವರು. ಕೋಟ್ಯಂತರ ಭಾರತೀಯರು ಗಾಂಧಿ ಹಾಕಿಕೊಟ್ಟ ಸತ್ಯ, ಅಹಿಂಸೆಯ ಹಾದಿಯಲ್ಲಿ ನಡೆಯುತ್ತಿದ್ದಾರೆ. ಇದು ಸತ್ಯ-ಅಸತ್ಯ, ಹಿಂಸೆ-ಅಹಿಂಸೆಯ ನಡುವಿನ ಹೋರಾಟ' ಎಂದು ಹೇಳಿದ್ದಾರೆ.
'ಮೋದಿ ಆಲ್ಬರ್ಟ್ ಐನ್‌ಸ್ಟೈನ್ ಹೆಸರು ಕೇಳಿದ್ದಾರೆಯೇ?, ಐನ್‌ಸ್ಟೈನ್ ಅವರು ಗಾಂಧಿ ಬಗ್ಗೆ ಹೇಳಿರುವ ವಿಚಾರಗಳು ಮೋದಿಗೆ ತಿಳಿದಿದೆಯೇ?, ಹಾಗಿದ್ದರೆ, ಐನ್‌ಸ್ಟೈನ್ (1955ರಲ್ಲಿ ಮೃತಪಟ್ಟರು) ಅವರು 1982ರಲ್ಲಿ ಗಾಂಧಿ ಸಿನಿಮಾ (1982) ಬಿಡುಗಡೆಯಾದ ನಂತರವಷ್ಟೇ ಗಾಂಧಿ ಬಗ್ಗೆ ತಿಳಿದುಕೊಂಡಿದ್ದರೇ' ಎಂದು ಮತ್ತೋರ್ವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.
ಮೋದಿ ಹೇಳಿಕೆ ವಿವಾದ:ಪ್ರಧಾನಿ ಮೋದಿ ಇತ್ತೀಚೆಗೆ ರಾಷ್ಟ್ರೀಯ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, "ವಿಶ್ವಾದ್ಯಂತ ಮಹಾತ್ಮಾ ಗಾಂಧಿ ಶ್ರೇಷ್ಠ ವ್ಯಕ್ತಿ ಹೌದು. ಆದರೆ, ಕಳೆದ 75 ವರ್ಷಗಳಿಂದ ಗಾಂಧಿ ಇಡೀ ವಿಶ್ವಕ್ಕೆ ಗೊತ್ತಿದ್ದಾರೆಯೇ ಎಂಬುದನ್ನು ಖಾತ್ರಿಪಡಿಸುವುದು ನಮ್ಮ ಕರ್ತವ್ಯವಲ್ಲವೇ?. ನನ್ನನ್ನು ಕ್ಷಮಿಸಿ, ಗಾಂಧಿ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಮೊದಲ ಬಾರಿಗೆ 'ಗಾಂಧಿ' ಸಿನಿಮಾ ಮಾಡಿದ ಬಳಿಕವಷ್ಟೇ ಜಗತ್ತಿಗೆ ಗಾಂಧಿ ಯಾರೆಂಬ ಕುತೂಹಲ ಉಂಟಾಯಿತು. ಇಂದಿನ ಜಗತ್ತಿನ ಬಹುತೇಕ ಸಮಸ್ಯೆಗಳಿಗೆ ಗಾಂಧಿ ಚಿಂತನೆಗಳಲ್ಲಿ ಪರಿಹಾರವಿದೆ. ಈ ಕುರಿತಾಗಿ ನಾವು ಬಹಳಷ್ಟು ಕಳೆದುಕೊಂಡಿದ್ದೇವೆ" ಎಂದು ಹೇಳಿದ್ದರು.
ಇದನ್ನೂ ಓದಿ:ಪ್ರಧಾನಿ ಮೋದಿಯವರು ದೇಶವನ್ನು ವಿಭಜಿಸಲು ಪ್ರಯತ್ನಿಸಬಾರದು: ರಾಹುಲ್ ಗಾಂಧಿ - rahul gandhi