ನವದೆಹಲಿ: ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸಿಂಗ್ ನಿಯಮಗಳನ್ನು ಉಲ್ಲಂಘಿಸಿ ಕಲಾಪವನ್ನು ಚಿತ್ರೀಕರಿಸಿದ ಆರೋಪದ ಮೇಲೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಮತ್ತು ಇತರರ ವಿರುದ್ಧ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಮಾರ್ಚ್ 28, 2024 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಸಂದರ್ಭದಲ್ಲಿ ಸುನೀತಾ ಕೇಜ್ರಿವಾಲ್ ಮತ್ತು ಇತರರು ವಿಚಾರಣಾ ನ್ಯಾಯಾಲಯದ ಕಲಾಪಗಳನ್ನು ಕಾನೂನು ಬಾಹಿರವಾಗಿ ಚಿತ್ರೀಕರಣ ಮಾಡಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ವಕೀಲರಾದ ವೈಭವ್ ಸಿಂಗ್ ಎಂಬವರು ಸಲ್ಲಿಸಿದ ಅರ್ಜಿಯಲ್ಲಿ, ಸುನೀತಾ ಮತ್ತು ಇತರರು ನ್ಯಾಯಾಲಯದ ಕಲಾಪವನ್ನು ಅನಧಿಕೃತವಾಗಿ ರೆಕಾರ್ಡ್ ಮಾಡಿಕೊಂಡಿರುವುದು ಮಾತ್ರವಲ್ಲದೇ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿಯೂ ಶೇರ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಲಾಪದ ಆಡಿಯೋ, ವೀಡಿಯೊ ರೆಕಾರ್ಡಿಂಗ್ ಅನ್ನು #MoneyTrailExposedByKejriwal ಹ್ಯಾಶ್ ಟ್ಯಾಗ್ನೊಂದಿಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಆಡಿಯೊ ಮತ್ತು ವಿಡಿಯೋ ರೆಕಾರ್ಡಿಂಗ್ಗಳನ್ನು ವೈರಲ್ ಮಾಡಲಾದ ಸಮಯ ಸಂದರ್ಭಗಳನ್ನು ನೋಡಿದರೆ, ನ್ಯಾಯಾಂಗದ ವರ್ಚಸ್ಸನ್ನು ಹಾಳುಮಾಡಲು, ರಾಷ್ಟ್ರದ ಸಾಮಾನ್ಯ ಜನರನ್ನು ದಾರಿತಪ್ಪಿಸಲು ಮತ್ತು ನ್ಯಾಯಾಂಗವು ಸರ್ಕಾರದ ಆಜ್ಞೆಯ ಮೇರೆಗೆ ಮತ್ತು ಕೇಂದ್ರ ಸರ್ಕಾರದ ಒತ್ತಡದ ಮೇರೆಗೆ ಕಾರ್ಯನಿರ್ವಹಿಸುತ್ತಿದೆ ಎಂದು ಜನರ ಮುಂದೆ ಬಿಂಬಿಸಲು ರಾಜಕೀಯ ಪಕ್ಷವೊಂದು ನಡೆಸಿದ ಆಳವಾದ ಪಿತೂರಿ ಇದಾಗಿದೆ." ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.