ಕೊಯಮತ್ತೂರು (ತಮಿಳುನಾಡು):ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ರಾಹುಲ್ ಗಾಂಧಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭರ್ಜರಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರ ರ‍್ಯಾಲಿಗಳ ನಡುವೆ ತುಸು ವಿರಾಮ ಪಡೆದ ಕಾಂಗ್ರೆಸ್ ಸಂಸದ ಸಿಂಗನಲ್ಲೂರಿನ ಸಿಹಿತಿಂಡಿ ಅಂಗಡಿಗೆ ಶುಕ್ರವಾರ ರಾತ್ರಿ ಭೇಟಿ ನೀಡಿದ್ದಾರೆ.
ತಮ್ಮ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರ ಜೊತೆಗೆ ಅಂಗಡಿಗೆ ಬಂದ ರಾಹುಲ್ ಗಾಂಧಿ, ತಮ್ಮ ಇಷ್ಟದ ಸಿಹಿಯಾದ ಜಾಮೂನು ಮತ್ತು ಮೈಸೂರು ಪಾಕ್ ಅನ್ನು ಖರೀದಿಸಿದ್ದಾರೆ. ಬಳಿಕ ಅಲ್ಲಿದ್ದ ಸಿಬ್ಬಂದಿ ಜೊತೆಗೆ ಫೋಟೋಗೂ ಪೋಸ್ ನೀಡಿದ್ದಾರೆ. ಕಾಂಗ್ರೆಸ್ ನಾಯಕನ ಹಠಾತ್ ಭೇಟಿಯಿಂದ ಅಂಗಡಿಯ ಮಾಲೀಕರು, ಸಿಬ್ಬಂದಿ ಆಶ್ಚರ್ಯಚಕಿತರಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಹಿ ಅಂಗಡಿ ಮಾಲೀಕ ಬಾಬು, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ನಮ್ಮ ಅಂಗಡಿಗೆ ಬಂದಾಗ ಆಶ್ಚರ್ಯವಾಯಿತು. ಕೊಯಮತ್ತೂರು ಸಭೆಯಲ್ಲಿ ಅವರು ಭಾಗಿಯಾಗಿದ್ದರು. ಇದೇ ಸಮಯದಲ್ಲಿ ಅವರು ಇಲ್ಲಿಗೆ ಬಂದು, 1 ಕೆಜಿ ಜಾಮೂನು, ಮೈಸೂರು ಪಾಕ್ ಸಿಹಿಯನ್ನು ಖರೀದಿಸಿದರು. ಇಲ್ಲಿದ್ದ ಇತರ ಸಿಹಿತಿಂಡಿಗಳ ರುಚಿ ನೋಡಿದರು. ಇದು ನಮಗೆ ಮತ್ತು ಸಿಬ್ಬಂದಿಗೆ ಸಂತಸ ತಂದಿತು. ಅರ್ಧಗಂಟೆ ಕಾಲ ಅವರು ನಮ್ಮೊಂದಿಗೆ ಬೆರೆತರು. ಖರೀದಿಸಿದ ಸಿಹಿಗೆ ಸಂಪೂರ್ಣ ಹಣವನ್ನು ಪಾವತಿಸಿದರು ಎಂದು ತಿಳಿಸಿದರು.
ಇನ್ನೂ ಸಿಹಿ ಅಂಗಡಿಗೆ ರಾಹುಲ್ ಭೇಟಿ ನೀಡಿದ ಸಿಸಿಟಿವಿ ದೃಶ್ಯವುಳ್ಳ ವಿಡಿಯೋವನ್ನು ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ರಾಹುಲ್ ಗಾಂಧಿ ಅವರು ಸಿಎಂ ಎಂಕೆ ಸ್ಟಾಲಿನ್ ಅವರಿಗೆ ಪ್ರಸಿದ್ಧ ಮೈಸೂರು ಪಾಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರು ತಮಿಳುನಾಡಿನ ಜನರೊಂದಿಗೆ ಹಂಚಿಕೊಳ್ಳುವ ಪ್ರೀತಿಯ ದ್ಯೋತಕ ಇದು ಎಂದು ಬಣ್ಣಿಸಲಾಗಿದೆ.