ಪಾಟ್ನಾ(ಬಿಹಾರ) :ಮುಖ್ಯಮಂತ್ರಿ ನಿತೀಶ್ಕುಮಾರ್ಗೆ ಬಾಂಬ್ ದಾಳಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಆರೋಪಿಯನ್ನು ಕರ್ನಾಟಕದಲ್ಲಿ ಬುಧವಾರ ಬಂಧಿಸಲಾಗಿದೆ. ಬಂಧಿತ ವ್ಯಕ್ತಿ ಬಿಹಾರ ಮೂಲದವನಾಗಿದ್ದು, ದಾವಣಗೆರೆಯ ಹರಿಹರ ತಾಲೂಕಿನಲ್ಲಿ ರೈಸ್ ಮಿಲ್ನಲ್ಲಿ ಕೆಲಸಕ್ಕಿದ್ದ ಎಂದು ತಿಳಿದುಬಂದಿದೆ.
ಸಿಎಂ ನಿತೀಶ್ಕುಮಾರ್ ಬಿಜೆಪಿ ಸಖ್ಯ ಬಿಡಬೇಕು, ಇಲ್ಲವಾದಲ್ಲಿ ಬಾಂಬ್ ದಾಳಿ ನಡೆಸಲಾಗುವುದು ಎಂದು ಬೆದರಿಕೆ ಹಾಕಿದ ಆಡಿಯೋವನ್ನು ಜನವರಿ 30 ರಂದು ರಾತ್ರಿ 8 ಗಂಟೆಗೆ ನೇರವಾಗಿ ಬಿಹಾರ ಪೊಲೀಸ್ ಮಹಾನಿರ್ದೇಶಕ ಆರ್.ಎಸ್.ಭಟ್ಟಿ ಅವರ ಮೊಬೈಲ್ ಫೋನ್‌ಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಿದ್ದ. ಇದರ ವಿಚಾರಣೆ ನಡೆಸಿದ ಆರ್ಥಿಕ ಅಪರಾಧ ವಿಭಾಗದ ಪೊಲೀಸರು, ಆರೋಪಿಯು ಕರ್ನಾಟಕದಲ್ಲಿ ಇರುವುದನ್ನು ಗುರುತಿಸಿದ್ದಾರೆ. ಬಳಿಕ, ಮೊಬೈಲ್ ನೆಟ್ವರ್ಕ್ ಆಧಾರದ ಮೇಲೆ ದಾವಣಗೆರೆಯ ಹರಿಹರಿ ತಾಲೂಕಿನಲ್ಲಿ ಆರೋಪಿ ಇರುವುದನ್ನು ಪತ್ತೆ ಮಾಡಿದ್ದಾರೆ. ಬುಧವಾರ ದಾಳಿ ಮಾಡಿ ಬಂಧಿಸಿ, ಪಟ್ನಾಗೆ ಕರೆದೊಯ್ದಿದ್ದಾರೆ.
ಆರೋಪಿಯನ್ನು ಸೋನು ಪಾಸ್ವಾನ್ ಎಂದು ಗುರುತಿಸಲಾಗಿದೆ. ಈತ ಬಿಹಾರದ ಸಮಷ್ಠಿಪುರ ಜಿಲ್ಲೆಯ ಹಸ್ನುಪುರದ ದಯಾನಗರ ನಿವಾಸಿಯಾಗಿದ್ದಾನೆ. ಕರ್ನಾಟಕದ ದಾವಣಗೆರೆಯ ಹರಿಹರ ತಾಲೂಕಿನ ರೈಸ್ ಮಿಲ್ನಲ್ಲಿ ಕೆಲಸಕ್ಕೆ ಸೇರಿದ್ದ. ಈಚೆಗೆ ನಿತೀಶ್ಕುಮಾರ್ ಆರ್ಜೆಡಿ ಸಖ್ಯ ತೊರೆದು ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದು, ಆರೋಪಿಯ ಅಸಮಾಧಾನಕ್ಕೆ ಕಾರಣವಾಗಿತ್ತು. ಕೆಲ ದಿನಗಳ ಹಿಂದೆ ಆರೋಪಿ, ಬಾಂಬ್ ದಾಳಿ ಬೆದರಿಕೆಯ ಅಲ್ಲಿನ ಪೊಲೀಸ್ ಮಹಾನಿರ್ದೇಶಕರ ಮೊಬೈಲ್ಗೆ ಆಡಿಯೋ ಕ್ಲಿಪ್ ಕಳುಹಿಸಿದ್ದ. ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ತಂಡ ರಚಿಸಿಕೊಂಡು ತನಿಖೆ ನಡೆಸಿದ್ದಾರೆ.