ಅಯೋಧ್ಯೆ(ಉತ್ತರ ಪ್ರದೇಶ):ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಇಂದು ಕುಟುಂಬಸಮೇತ ರಾಮ ಮಂದಿರಕ್ಕೆ ಭೇಟಿ ನೀಡಿ, ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಆಮ್ಆದ್ಮಿ ಪಕ್ಷದ ನಾಯಕರ ಕುಟುಂಬಸ್ಥರು ರಾಮಮಂದಿರದಲ್ಲಿ ಸುಮಾರು ಒಂದು ಗಂಟೆ 15 ನಿಮಿಷಗಳ ಕಾಲ ಕಳೆದಿದ್ದಾರೆ.
ದೇವರ ದರ್ಶನದ ಬಳಿಕ ಅರವಿಂದ್ ಕೇಜ್ರಿವಾಲ್ ಮಾತನಾಡಿ, "ಇಂದು ನನಗೆ ರಾಮಲಲ್ಲಾನ ದರ್ಶನ ಪಡೆಯುವ ಸೌಭಾಗ್ಯ ಸಿಕ್ಕಿತು. ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ನನಗೆ ಮನಸ್ಸಿನಲ್ಲಿ ಪ್ರಶಾಂತತೆ ಅನುಭವಾಯಿತು. ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ಸುಂದರವಾದ ಮತ್ತು ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗಿದೆ. ಪ್ರತಿದಿನ ಲಕ್ಷಾಂತರ ರಾಮ ಭಕ್ತರು ಪೂಜೆ ಸಲ್ಲಿಸಲು ಬರುತ್ತಿರುವುದು ಇಡೀ ಜಗತ್ತಿಗೆ ಅದೃಷ್ಟದ ವಿಷಯ. ಪ್ರತಿಯೊಬ್ಬರ ಸಂತೋಷ, ಶಾಂತಿ ಮತ್ತು ಆರೋಗ್ಯಕ್ಕಾಗಿ ನಾವು ದೇವಾಲಯದಲ್ಲಿ ಪ್ರಾರ್ಥಿಸಿದ್ದೇವೆ" ಎಂದರು.
ಪಂಜಾಬ್ ಸಿಎಂ ಭಗವಂತ್ ಮಾನ್ ಮಾತನಾಡಿ, "ಭಾರತವು ಬಹು ಧಾರ್ಮಿಕ ನಂಬಿಕೆಗಳ ದೇಶವಾಗಿದ್ದು, ಇಲ್ಲಿ ಎಲ್ಲಾ ಹಬ್ಬಗಳನ್ನೂ ಒಟ್ಟಿಗೆ ಆಚರಿಸಲಾಗುತ್ತದೆ. ರಾಮಮಂದಿರದಲ್ಲಿ ನಾವು ದೇಶದಲ್ಲಿ ಶಾಂತಿ ಮತ್ತು ಸಹೋದರತ್ವಕ್ಕಾಗಿ ಪ್ರಾರ್ಥಿಸಿದ್ದೇವೆ. ಭಾರತವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುವ ವಿವಿಧ ಬಣ್ಣಗಳ ಹೂವುಗಳ ಗುಚ್ಛ" ಎಂದು ಹೇಳಿದ್ದಾರೆ.