ನವದೆಹಲಿ :ಇಲ್ಲಿನಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು)ದಲ್ಲಿಸ್ಟೂಡೆಂಟ್ ಯೂನಿಯನ್ ಎಲೆಕ್ಷನ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಶುಕ್ರವಾರ ತಡರಾತ್ರಿ ಕಾಲೇಜು ಕ್ಯಾಂಪಸ್‌ನಲ್ಲಿ ಚುನಾವಣೆ ನಡೆಸುವ ಬಗ್ಗೆ ಕರೆಯಲಾಗಿದ್ದ ಸಭೆಯಲ್ಲಿ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಶನ್ (ಡಿಎಸ್‌ಎಫ್) ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ.
ಘಟನೆಯಲ್ಲಿ ಎರಡು ಗುಂಪಿನ ಕೆಲವರು ಗಾಯಗೊಂಡಿದ್ದು, ಘಟನೆ ಬಗ್ಗೆ ಎರಡೂ ಗುಂಪಿನವರು ಪರಸ್ಪರ ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಜೆಎನ್‌ಯು ಆಡಳಿತ ಮಂಡಳಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2024ರ ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆಗಾಗಿ ಸದಸ್ಯರನ್ನು ಆಯ್ಕೆ ಮಾಡಲು ಸಬರಮತಿ ಧಾಬಾದಲ್ಲಿ ವಿಶ್ವವಿದ್ಯಾನಿಲಯದ ಜನರಲ್ ಬಾಡಿ ಮೀಟಿಂಗ್ (ಯುಜಿಬಿಎಮ್) ಕರೆಯಲಾಗಿತ್ತು.
ಎರಡು ಗುಂಪುಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವಾಗ್ವಾದ ನಡೆಸುತ್ತಿರುವುದು ಕಂಡು ಬಂದಿದೆ. ಈ ವೇಳೆ ವಿಶ್ವವಿದ್ಯಾನಿಲಯದ ಭದ್ರತಾ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸುತ್ತಿದ್ದಾರೆ. ಘರ್ಷಣೆಯಲ್ಲಿ ಜೆಎನ್‌ಯುಎಸ್‌ಯು ಅಧ್ಯಕ್ಷೆ ಐಶೆ ಘೋಷ್ ಮೇಲೆ ಎಬಿವಿಪಿ ವಿದ್ಯಾರ್ಥಿಗಳು ಹಲ್ಲೆ ನಡೆಸಿ ಆಕೆಯ ಮೇಲೆ ನೀರು ಎಸೆದಿದ್ದಾರೆ ಎಂದು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ದೂರಿದೆ.
ಇನ್ನೊಂದೆಡೆ ಅಂತಿಮ ವರ್ಷದ ಎಂಎ ವಿದ್ಯಾರ್ಥಿನಿ ಮೇಲೆ ಹರಿತವಾದ ಆಯುಧದಿಂದ ಡಿಎಸ್‌ಎಫ್ ಸಂಘಟನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಎಬಿವಿಪಿ ಆರೋಪಿಸಿದೆ. ಜೊತೆಗೆ ಎಡಪಂಥೀಯ ಗುಂಪುಗಳ ವಿದ್ಯಾರ್ಥಿಗಳು ಬಿಎ ಪರ್ಷಿಯನ್‌ನ ವಿಕಲಚೇತನ ವಿದ್ಯಾರ್ಥಿನಿ ದಿವ್ಯಾ ಪ್ರಕಾಶ್ ಮೇಲೆ ಎಬಿವಿಪಿಯನ್ನು ಬೆಂಬಲಿಸುತ್ತಿದ್ದರಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ :ಅಸ್ಸೋಂ ಪೊಲೀಸ್ ಅಕಾಡೆಮಿಯಲ್ಲಿ ಘರ್ಷಣೆ: 7 ಪ್ರಶಿಕ್ಷಣಾರ್ಥಿಗಳಿಗೆ ಗಾಯ