ನವದೆಹಲಿ: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಗುರುವಾರವಷ್ಟೇ ಕೇರಳದ ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿ ಮತ್ತೊಮ್ಮೆ ಕಣಕ್ಕಿಳಿಯುವ ಕುರಿತು ಪಕ್ಷ ಘೋಷಿಸಿದೆ. ಇದರ ಮರು ದಿನವೇ ಕಾಂಗ್ರೆಸ್‌ನ ಸಾಂಪ್ರದಾಯಿಕ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಥಿಯಿಂದಲೂ ರಾಹುಲ್ ಸ್ಪರ್ಧಿಸಬೇಕು ಎಂಬ ಕೂಗು ಪಕ್ಷದಲ್ಲಿ ಎದ್ದಿದೆ.
ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್ ಬರೇಲಿ ಲೋಕಸಭೆ ಕ್ಷೇತ್ರಗಳು ಗಾಂಧಿ ಕುಟುಂಬದ ಭದ್ರಕೋಟೆಗಳಾಗಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಜೊತೆಗೆ ವಯನಾಡು ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಸೋತು, ವಯನಾಡಿನಲ್ಲಿ ಗೆಲುವು ದಕ್ಕಿಸಿಕೊಂಡಿದ್ದರು. ಮತ್ತೊಂದೆಡೆ, ರಾಯ್ ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ಗೆದ್ದು ತಮ್ಮ ಭದ್ರಕೋಟೆ ಎಂಬುವುದನ್ನು ನಿರೂಪಿಸಿದ್ದರು. ಆದರೆ, ಈ ಬಾರಿ ಸೋನಿಯಾ ಗಾಂಧಿ ತಮ್ಮ ಆರೋಗ್ಯ ಮತ್ತು ವಯಸ್ಸಿನ ಕಾರಣದಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಸದ್ಯ ಅಮೇಥಿ ಮತ್ತು ರಾಯ್ ಬರೇಲಿ ಮಾತ್ರವಲ್ಲದೇ ಇಡೀ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸಂಸದರು ಇರದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಈ ಪ್ರಮುಖ ಎರಡೂ ಕ್ಷೇತ್ರಗಳಿಂದ ಯಾರು ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಹೀಗಾಗಿ ಇತ್ತೀಚೆಗೆ ಅಮೇಥಿ ಮತ್ತು ರಾಯ್ ಬರೇಲಿಯ ಎಐಸಿಸಿಯ ಉನ್ನತ ಪದಾಧಿಕಾರಿಗಳು, ರಾಜ್ಯ ನಾಯಕರು ಮತ್ತು ಸ್ಥಳೀಯ ಕಾರ್ಯಕರ್ತರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರನ್ನೂ ಭೇಟಿ ಮಾಡಿ ಉತ್ತರ ಪ್ರದೇಶದಿಂದಲೇ ಚುನಾವಣಾ ಕಣಕ್ಕೆ ಇಳಿಯುವಂತೆ ಒತ್ತಾಯಿಸಿದ್ದಾರೆ.
'ಈಟಿವಿ ಭಾರತ್'ಗೆ ಉತ್ತರ ಪ್ರದೇಶದ ಪಕ್ಷದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಈ ವಿಷಯವನ್ನು ಖಚಿತ ಪಡಿಸಿದ್ದಾರೆ. ''ಉತ್ತರ ಪ್ರದೇಶದ ಹಿರಿಯ ನಾಯಕರು ಮತ್ತು ಕಾರ್ಯಕರ್ತರ ನಿಯೋಗವು ಇತ್ತೀಚೆಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರನ್ನೂ ಭೇಟಿ ಮಾಡಿ ಅಮೇಥಿ ಮತ್ತು ರಾಯ್ ಬರೇಲಿ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಒತ್ತಾಯಿಸಿದೆ. ಇಬ್ಬರು ಪ್ರಮುಖ ನಾಯಕರ ಸ್ಪರ್ಧೆಯಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಭವಿಷ್ಯವನ್ನು ಖಂಡಿತವಾಗಿಯೂ ಹೆಚ್ಚಿಸಲಿದೆ ಎಂದು ನಾವು ಭಾವಿಸಿದ್ದೇವೆ. ಇಬ್ಬರು ನಾಯಕರು ನಮ್ಮ ಮನವಿಯನ್ನು ತಾಳ್ಮೆಯಿಂದ ಆಲಿಸಿದ್ದಾರೆ. ಆದರೆ, ಸ್ಪರ್ಧೆಯ ಅಂತಿಮ ನಿರ್ಧಾರ ಅವರಿಗೆ ಬಿಟ್ಟದ್ದು" ಎಂದು ತಿಳಿಸಿದರು.
ಕಾಂಗ್ರೆಸ್‌ನ ಹಿರಿಯ ನಾಯಕ ದೀಪಕ್ ಸಿಂಗ್ ಸಹ 'ಈಟಿವಿ ಭಾರತ್' ಜೊತೆಗೆ ಮಾತನಾಡಿ, "ಇಬ್ಬರು ಪ್ರಮುಖ ನಾಯಕರು ಸ್ಪರ್ಧೆ ಸೇರಿದರೆ, ರಾಜ್ಯಾದ್ಯಂತ ಮತದಾರರಿಗೆ ಸಂದೇಶ ರವಾನೆ ಆಗುತ್ತದೆ. ಕಾಂಗ್ರೆಸ್‌ನ 17 ಕ್ಷೇತ್ರಗಳು ಮಾತ್ರವಲ್ಲದೇ ಇನ್ನುಳಿದ 63 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಮೈತ್ರಿ ಪಕ್ಷ ಸಮಾಜವಾದಿ ಪಕ್ಷಕ್ಕೂ ಲಾಭವಾಗಲಿದೆ'' ಎಂದು ಅಭಿಪ್ರಾಯಪಟ್ಟರು. ಅಲ್ಲದೇ, ''ಇತ್ತೀಚೆಗೆ ರಾಹುಲ್ ಗಾಂಧಿಯವರ ಅಮೇಥಿ ರ‍್ಯಾಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಮೇಥಿ ಮತದಾರರೊಂದಿಗೆ ರಾಹುಲ್ ಸಂಬಂಧ ಹೀಗೆಯೇ ಇರುತ್ತದೆ ಎಂದು ಖರ್ಗೆ ಅವರು ಸಹ ಹೇಳಿದ್ದಾರೆ. ರಾಹುಲ್ ಮತ್ತೆ ಸ್ಪರ್ಧಿಸುವ ಸಾಧ್ಯತೆಯ ಬಗ್ಗೆ ಇಲ್ಲಿನ ಕಾರ್ಯಕರ್ತರು ಉತ್ಸುಕರಾಗಿದ್ದಾರೆ. ಮುಂದಿನ ವಾರದಿಂದ ಕ್ಷೇತ್ರ ವ್ಯಾಪ್ತಿಯ ಎಲ್ಲ ಬ್ಲಾಕ್‌ಗಳಲ್ಲಿ ಪ್ರವಾಸ ಕೈಗೊಂಡು ಚುನಾವಣೆಗೆ ಸಿದ್ಧತೆ ನಡೆಸುತ್ತೇನೆ'' ಎಂದು ಮಾಹಿತಿ ನೀಡಿದರು.
ಮಾರ್ಚ್ 11ರಂದು ನಿರ್ಧಾರ: ಉತ್ತರ ಪ್ರದೇಶದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಮೇಥಿಯಿಂದ ರಾಹುಲ್ ಗಾಂಧಿ ಅಭ್ಯರ್ಥಿಯಾಗುವ ಬಗ್ಗೆ ಬಹಳ ಭರವಸೆ ಹೊಂದಿದ್ದಾರೆ. ಲೋಕಸಭೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ (ಸಿಇಸಿ)ಯು ಮಾರ್ಚ್ 11ರಂದು ಮತ್ತೊಮ್ಮೆ ಸಭೆ ಸೇರಲಿದೆ. ಆಗ ಅಮೇಥಿಯಿಂದ ರಾಹುಲ್ ಗಾಂಧಿ ಸ್ಪರ್ಧೆ ಕುರಿತು ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಈ ವಿಷಯವನ್ನೂ ದೀಪಕ್ ಸಿಂಗ್ ದೃಢಪಡಿಸಿದ್ದಾರೆ.
ಆಧ್ಯಾತ್ಮಿಕತೆ, ಸಂಖ್ಯೆ ನಂಟು:ಮಾರ್ಚ್ 7ರಂದು ನಡೆದ ಮೊದಲ ಸುತ್ತಿನ ಸಿಇಸಿ ಸಭೆಯಲ್ಲೇ ವಯನಾಡಿನಿಂದ ರಾಹುಲ್ ಗಾಂಧಿ ಹೆಸರನ್ನು ಅಂತಿಮಗೊಳಿಸಿತ್ತು. ಆದರೆ, ಆಧ್ಯಾತ್ಮಿಕ ಕಾರಣದಿಂದ ಮಾರ್ಚ್ 8ರಂದು ಮಹಾ ಶಿವರಾತ್ರಿ ನಿಮಿತ್ತ ಅಂದು ಅಭ್ಯರ್ಥಿಗಳ ಪಟ್ಟಿ ಘೋಷಿಸಲಾಗಿತ್ತು. ಯಾಕೆಂದರೆ, ರಾಹುಲ್ ಗಾಂಧಿ ಭಗವಾನ್ ಶಿವನ ಭಕ್ತ. ಮಾರ್ಚ್ 5ರಂದು ಕೇರಳ ಸ್ಕ್ರೀನಿಂಗ್ ಕಮಿಟಿಯು ವಯನಾಡಿನಿಂದ ರಾಹುಲ್ ಹೆಸರನ್ನು ಅಂತಿಮಗೊಳಿಸಿ, ಸಿಇಸಿಗೆ ರವಾನಿಸಿದಾಗ ಅವರು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಶಿವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಇದೇ ಆಧ್ಯಾತ್ಮಿಕ ಕಾರಣದಿಂದ ಅವರ ಉಮೇದುವಾರಿಕೆ ಘೋಷಿಸಲು ಮಹಾ ಶಿವರಾತ್ರಿಯನ್ನು ಆಯ್ಕೆ ಮಾಡಲಾಯಿತು ಎಂದು ಎಐಸಿಸಿ ಹಿರಿಯ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಉತ್ತರ ಪ್ರದೇಶದ ಮಾಜಿ ಎಂಎಲ್‌ಸಿ ದೀಪಕ್ ಸಿಂಗ್ ಪ್ರಕಾರ, ರಾಹುಲ್ ಗಾಂಧಿ ಅಮೇಥಿಯಿಂದ ಅಭ್ಯರ್ಥಿ ಆಗುವುದಕ್ಕೆ ಜ್ಯೋತಿಷ್ಯದ ಸಂಬಂಧ ಇದೆಯಂತೆ. ''ಅಮೇಥಿಯು ಸಂಖ್ಯೆ 21ರೊಂದಿಗೆ ನಂಟು ಹೊಂದಿದ ಎಂದು ಒಮ್ಮೆ ಜ್ಯೋತಿಷಿಯೊಬ್ಬರು ನನಗೆ ಹೇಳಿದ್ದರು. 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ನಿಧನ ಹೊಂದಿದಾಗ ದಿನಾಂಕ ಮೇ 21 ಆಗಿತ್ತು. ಆಗ ರಾಹುಲ್ ಗಾಂಧಿ ಅವರಿಗೆ 21 ವರ್ಷ ವಯಸ್ಸು. ಜೊತೆಗೆ ಪ್ರತಿ 21 ವರ್ಷಗಳ ನಂತರ ಅಮೇಥಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ. 2019ರಲ್ಲಿ ರಾಹುಲ್ ಗಾಂಧಿ ಸೋಲು ಕಾಣುವುದಕ್ಕಿಂತ 21 ವರ್ಷಗಳ ಮೊದಲು ಎಂದರೆ, 1998ರಲ್ಲಿ ಪಕ್ಷದ ಅಭ್ಯರ್ಥಿ ಸತೀಶ್ ಶರ್ಮಾ ಚುನಾವಣೆಯಲ್ಲಿ ಸೋತಿದ್ದರು. ಈಗ ಪರಿಸ್ಥಿತಿ ಅನುಕೂಲಕರವಾಗಿದೆ. ಈ ಲೋಕಸಭೆ ಸ್ಥಾನವನ್ನು ಪಕ್ಷವು ಕಳೆದುಕೊಳ್ಳುವುದಿಲ್ಲ ಮತ್ತು ರಾಹುಲ್ ಗೆಲ್ಲುವುದು ಖಚಿತವಾಗಲಿದೆ'' ಎಂದು ದೀಪಕ್ ಸಿಂಗ್ ವಿವರಿಸಿದರು.
ಇದನ್ನೂ ಓದಿ:ಲೋಕ ಸಮರಕ್ಕೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ: ರಾಹುಲ್ ಗಾಂಧಿ ಸೇರಿ 39 ಅಭ್ಯರ್ಥಿಗಳ ಹೆಸರು ಪ್ರಕಟ