ಶಿಮ್ಲಾ(ಹಿಮಾಚಲ ಪ್ರದೇಶ): ಕೋಟ್ಯಂತರ ರೂಪಾಯಿ ಹಗರಣ, ಭ್ರಷ್ಟಾಚಾರ ಸೇರಿದಂತೆ ಹಲವು ಗಂಭೀರ ಪ್ರಕರಣಗಳ ತನಿಖೆಯನ್ನು ತನಿಖಾ ಸಂಸ್ಥೆಗಳಿಗೆ ವಹಿಸುವುದು ಸಾಮಾನ್ಯ. ಆದರೆ, ನಾಪತ್ತೆಯಾದ ಸಮೋಸಾಗಾಗಿ ಸಿಐಡಿ ತನಿಖೆ ನಡೆದಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಸದ್ಯ ಸಮೋಸಾ ಕುರಿತ ತನಿಖೆ ದೇಶಾದ್ಯಂತ ಭಾರೀ ಸುದ್ದಿಯಾಗುತ್ತಿದೆ.
ಸಿಎಂ ಸುಖ್ವಿಂದರ್ ಸಿಂಗ್ ಸುಖುಗಾಗಿ ಶಿಮ್ಲಾದ ಪ್ರಸಿದ್ಧ ಹೋಟೆಲ್ನಿಂದ ಆರ್ಡರ್ ಮಾಡಿ ತರಿಸಿದ ಸಮೋಸಾಗಳನ್ನು ಯಾರು ತಿಂದರು ಎಂಬುದರ ಬಗ್ಗೆ ತನಿಖೆ ನಡೆಸಿ ವರದಿಯನ್ನು ಸಿಐಡಿ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಆದರೆ, ವರದಿ ಸೋರಿಕೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಜೆಪಿ ಈ ವಿಚಾರವನ್ನು ಇಟ್ಟುಕೊಂಡು ಟೀಕಾಪ್ರಹಾರ ನಡೆಸುತ್ತಿದೆ.
ನಡೆದಿದ್ದೇನು?:ಅ.21 ರಂದು ಮುಖ್ಯಮಂತ್ರಿ ಆಗಮನದ ಕಾರಣ ಚಹಾ ಕೂಟಕ್ಕೆ ಐಜಿಪಿ ಅವರು ಸಬ್ಇನ್ಸ್ಪೆಕ್ಟರ್ವೊಬ್ಬರನ್ನು ಕರೆದು ಲಕ್ಕರ್ ಬಜಾರ್ ಬಳಿ ಇರುವ ಹೋಟೆಲ್ನಿಂದ ಸಮೋಸಾ ತರುವಂತೆ ಸೂಚಿದ್ದರು. ಅದರಂತೆ ಸಬ್ಇನ್ಸ್ಪೆಕ್ಟರ್, ಎಎಸ್ಐ ಮತ್ತು ಸಿಬ್ಬಂದಿಯೊಬ್ಬ ಕಳುಹಿಸಿ ಹೋಟೆಲ್ನಿಂದ ಮೂರು ಬಾಕ್ಸ್ಗಳಲ್ಲಿ ಸಮೋಸಾ ಮತ್ತು ಕೇಕ್ ತರಿಸಿದ್ದರು.
ಬಳಿಕ ಎಸ್ಐ ಈ ಮೂರು ಬಾಕ್ಸ್‌ಗಳನ್ನು ತೆಗೆದುಕೊಂಡು ಹೋಗಿ ರಿಸೆಪ್ಷನ್ನಲ್ಲಿದ್ದ ಮಹಿಳಾ ಇನ್ಸ್‌ಪೆಕ್ಟರ್‌ಗೆ ಸಿಎಂ ಸಾಹೇಬರಿಗೆ ಸಮೋಸಾ ತಂದಿರುವುದಾಗಿ ಹೇಳಿದ್ದಾರೆ. ಅದಕ್ಕೆ ಅವರು ಈ ಮೂರು ಬಾಕ್ಸ್‌ಗಳನ್ನು ಸಿಐಡಿ ಕಚೇರಿಯಲ್ಲಿ ಇಡುವಂತೆ ಸೂಚಿದ್ದರು. ಆದರೆ ಈ ಸಮೋಸಾಗಳು ಚಹಾ ಕೂಟಕ್ಕೆ ತಲುಪಿಲ್ಲ.