ಕರ್ನಾಟಕ

karnataka

ETV Bharat / bharat

ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ, 16 ಮಂದಿ ಸಾವು.. ಹಲವೆಡೆ ಭಾರಿ ನಷ್ಟ - TELANGANA RAINS - TELANGANA RAINS

ತೆಲಂಗಾಣ ರಾಜ್ಯಾದ್ಯಂತ ಮಂಗಳವಾರ ಸುರಿದ ಧಾರಾಕಾರ ಮಳೆಯಿಂದಾಗಿ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ.

Heavy Rains Lash Telangana
ತೆಲಂಗಾಣದಲ್ಲಿ ಧಾರಾಕಾರ ಮಳೆ (ETV Bharat)

By ETV Bharat Karnataka Team

Published : May 8, 2024, 10:59 PM IST

ಹೈದರಾಬಾದ್ (ತೆಲಂಗಾಣ): ತೆಲಂಗಾಣದಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜ್ಯಾದ್ಯಂತ ಪ್ರತ್ಯೇಕ ಘಟನೆಗಳಲ್ಲಿ ನಾಲ್ಕು ವರ್ಷದ ಮಗು ಸೇರಿದಂತೆ 16 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ರಾಜಧಾನಿ ಹೈದರಾಬಾದ್‌ನಲ್ಲಿ ತಡೆಗೋಡೆ ಕುಸಿದು ಏಳು ಜನರು ಅಸುನೀಗಿದ್ದಾರೆ.

ಹೈದರಾಬಾದ್​ನ ಬಾಚುಪಲ್ಲಿ ಪ್ರದೇಶದಲ್ಲಿ ಮಂಗಳವಾರ ಸಂಜೆ ಭಾರೀ ಮಳೆಯಿಂದಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ತಡೆಗೋಡೆ ಕುಸಿದಿದೆ. ಇದರ ಪರಿಣಾಮ ಒಡಿಶಾ ಮತ್ತು ಛತ್ತೀಸ್‌ಗಢದ ಮೂಲದ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಬುಧವಾರ ಬೆಳಗ್ಗೆ ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ತಿರುಪತಿ (22), ಶಂಕರ್ (22), ರಾಜು (25), ಖುಷಿ (25), ರಾಮ್ ಯಾದವ್ (34), ಗೀತಾ (32) ಮತ್ತು ಹಿಮಾಂಶು (4) ಎಂದು ಗುರುತಿಸಲಾಗಿದೆ. ಮತ್ತೊಂದೆಡೆ, ಎಸ್‌.ಆರ್‌.ನಗರದಲ್ಲಿ ಬುಧವಾರ ಬೆಳಗ್ಗೆ ಚರಂಡಿಯಲ್ಲಿ 35 ರಿಂದ 40 ವರ್ಷದೊಳಗಿನ ಇಬ್ಬರ ಶವಗಳು ಪತ್ತೆಯಾಗಿವೆ. ಈ ಮೃತರು ಒಡಿಶಾ ಮೂಲದವರಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಬೇಗಂಪೇಟೆ ಪೊಲೀಸರು ಹೇಳಿದ್ದಾರೆ.

ಅಲ್ಲದೇ, ಹೈದರಾಬಾದ್‌ನ ಓಲ್ಡ್ ಟೌನ್‌ನ ಬಹದ್ದೂರ್‌ಪುರ ಪ್ರದೇಶದಲ್ಲಿ ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೇದಕ್ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಗೋಡೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಮಾದಾಸು ನಾಗಬಾಲ ಗಂಗಾಧರ ರಾವ್ (38) ಮತ್ತು ಚಿಂತಪಲ್ಲಿ ಸುಬ್ರಮಣ್ಯಂ (40) ಎಂಬುವರೇ ಮೃತರೆಂದು ಗುರುತಿಸಲಾಗಿದೆ.

ಸಿಡಿಲು ಬಡಿದು ರೈತರು ಸಾವು: ಸಿದ್ದಿಪೇಟೆ ಜಿಲ್ಲೆ ಮತ್ತು ಸಂಗಾರೆಡ್ಡಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ರೈತರು ಮೃತಪಟ್ಟಿದ್ದಾರೆ. ಮೃತರನ್ನು ಕುಮ್ಮರಿ ಮಲ್ಲೇಶಂ (36) ಮತ್ತು ಬೋನಿ ಪಾಪಯ್ಯ (52) ಎಂದು ಗುರುತಿಸಲಾಗಿದೆ. ವರ್ಧನ್ನಪೇಟೆ ಮಂಡಲದಲ್ಲಿ ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿದ್ದ ವೇಳೆ ಒಣ ಮರ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಅಬರ್ಲ ದಯಾಕರ್ (22) ಮತ್ತು ನವೀನ್ ಎಂಬುವವರೇ ಮೃತರೆಂದು ಗುರುತಿಸಲಾಗಿದೆ.

ರಾಜ್ಯದಲ್ಲಿ ಬಿಸಿಗಾಳಿಗೆ ಜನತೆ ತತ್ತರಿಸಿ ಹೋಗಿದ್ದರು. ಆದರೆ, ಮಂಗಳವಾರ ಸಂಜೆ ರಾಜ್ಯಾದ್ಯಂತ ಭಾರೀ ಮಳೆಯಾಗಿದೆ. ಹೈದರಾಬಾದ್​ ನಗರ ಮತ್ತು ತೆಲಂಗಾಣದ ಹಲವು ಭಾಗಗಳಲ್ಲಿ ಭರ್ಜರಿ ಮಳೆ ಸುರಿದಿದೆ. ಇದರಿಂದ ಕೆಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹೈದರಾಬಾದ್ ನಗರದ ಹಲವೆಡೆ ಜಲಾವೃತವಾಗಿದ್ದು, ಪರಿಹಾರ ಕಾರ್ಯಕ್ಕೆ ವಿಪತ್ತು ಪರಿಹಾರ ಪಡೆಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ:ಬೆಂಗಳೂರಲ್ಲಿ ಸಂಜೆ ಮತ್ತೆ ಮಳೆಯ ಆರ್ಭಟ

ABOUT THE AUTHOR

...view details