ಬೆಮೆತಾರಾ (ಛತ್ತೀಸ್‌ಗಢ): ಶನಿವಾರ ಇಲ್ಲಿನ ಗನ್‌ಪೌಡರ್ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ 8 ಜನ ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದ್ದಾರೆ.
ಗನ್‌ಪೌಡರ್ ಕಾರ್ಖಾನೆಯಲ್ಲಿ ನಡೆದ ಸ್ಫೋಟದಲ್ಲಿ ಶನಿವಾರ ಓರ್ವ ಸಾವನ್ನಪ್ಪಿ, ಆರು ಜನ ಗಾಯಗೊಂಡಿದ್ದರು. ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ಮತ್ತು ಜಿಲ್ಲಾಡಳಿತದ ತಂಡಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದವು. ಇದೀಗ ಕಾರ್ಯಾಚರಣೆ ಮುಗಿದಿದ್ದು, ಇನ್ನೂ 8 ಕಾರ್ಮಿಕರು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಸ್ಫೋಟದಲ್ಲಿ ನಮ್ಮ ಮನೆಯವರು ನಾಪತ್ತೆಯಾಗಿದ್ದಾರೆ ಎಂದು 8 ಜನ ಕಾರ್ಮಿಕರ ಕುಟುಂಬಸ್ಥರು ಹೇಳಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಸ್ಫೋಟದಲ್ಲಿ ನಮ್ಮವರು ಕಾಣೆಯಾಗಿದ್ದಾರೆ ಎಂದು 8 ಮಂದಿ ಕಾರ್ಮಿಕರ ಕುಟುಂಬಗಳು ಪೊಲೀಸರಿಗೆ ದೂರು ನೀಡಿವೆ. ಸ್ಫೋಟದಲ್ಲಿ ಕಾರ್ಮಿಕರ ದೇಹಗಳು ಛಿದ್ರ ಛಿದ್ರವಾಗಿದ್ದು, ಅವಶೇಷಗಳಿಂದ ಹೊರ ತೆಗೆಯಲಾಗಿದೆ. ಡಿಎನ್ಎ ಪರೀಕ್ಷೆ ನಡೆಸಿ ಗುರುತು ಪತ್ತೆ ಹಚ್ಚಲಾಗುವುದು ಎಂದು ಎಸ್ಪಿ ರಾಮಕೃಷ್ಣ ಸಾಹು ಮಾಹಿತಿ ನೀಡಿದ್ದಾರೆ.
ನಾಪತ್ತೆಯಾಗಿರುವ ಕಾರ್ಮಿಕರ ಕುಟುಂಬಸ್ಥರಿಗೆ ತಲಾ 10 ಲಕ್ಷ ಪರಿಹಾರ ನೀಡುವಂತೆ ಕಾರ್ಖಾನೆಗೆ ಸೂಚಿಸಿದ್ದೇವೆ. ಕಾರ್ಯಾಚರಣೆ ಮುಗಿದಿದ್ದು, ಕಾರ್ಮಿಕರ ಗುರುತು ಪತ್ತೆಹಚ್ಚಲು ಡಿಎನ್ಎ ಮಾದರಿಯನ್ನು ಪರೀಕ್ಷೆಗೆ ಕಳುಹಿಸುತ್ತೇವೆ ಎಂದು ಡಿಸಿ ರಣಬೀರ್ ಶರ್ಮಾ ತಿಳಿಸಿದ್ದಾರೆ.
ಡಿಎನ್ಎ ಪತ್ತೆ ಬಳಿಕ ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರದ ಹಣವನ್ನು ಕುಟುಂಬಸ್ಥರಿಗೆ ವಿತರಿಸಲಾಗುವುದು ಎಂದು ಡಿಸಿ ಮಾಹಿತಿ ನೀಡಿದ್ದಾರೆ. ಘಟನೆ ಬಳಿಕ ಸ್ಥಳೀಯರು ಆಕ್ರೋಶಗೊಂಡಿದ್ದರಿಂದ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಶನಿವಾರ ನಡೆದ ಸ್ಫೋಟ: ಇಲ್ಲಿನ ಸ್ಪೆಷಲ್ ಬ್ಲಾಸ್ಟ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಶನಿವಾರ ಬೆಳಗ್ಗೆ ಸುಮಾರಿಗೆ 8 ಗಂಟೆಗೆ ಈ ಸ್ಫೋಟ ಸಂಭವಿಸಿದ್ದು, ಮಾಹಿತಿ ಪ್ರಕಾರ ಸ್ಫೋಟದಿಂದ ಕಾರ್ಖಾನೆಯಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿದಿದೆ. ಕಾರ್ಖಾನೆಯಲ್ಲಿ ಕನಿಷ್ಠ 100 ಮಂದಿ ಕೆಲಸ ಮಾಡುತ್ತಿದ್ದರು ಎಂದು ಕೆಲವು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟದ ದೃಶ್ಯಗಳು ಸಿಸಿಟಿವಿ ಮತ್ತು ಮೊಬೈಲ್ ಕ್ಯಾಮರಾದಲ್ಲೂ ಸೆರೆಯಾಗಿವೆ. ದೊಡ್ಡ ಸ್ಫೋಟದೊಂದಿಗೆ ಮುಗಿಲೆತ್ತರಕ್ಕೆ ದಟ್ಟವಾಗಿ ಹೊಗೆ ಆವರಿಸಿದ ದೃಶ್ಯಗಳನ್ನು ಕಾಣಬಹುದಾಗಿದೆ. ಜೊತೆಗೆ ಭಯದಿಂದ ಜನರು ಓಡಾಟವೂ ವಿಡಿಯೋಗಳಲ್ಲಿ ದಾಖಲಾಗಿದೆ. ಆದರೆ, ಇದುವರೆಗೆ ಸ್ಫೋಟಕ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಅರುಣ್ ಸಾವೋ, ಭೇಟಿ ನೀಡಿ ಪರಿಶೀಲನೆ ನಡೆಸಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶನಿವಾರ ತಿಳಿಸಿದ್ದರು.
ಇದನ್ನೂ ಓದಿ: Watch; ಗನ್‌ಪೌಡರ್ ಕಾರ್ಖಾನೆಯಲ್ಲಿ ಭೀಕರ ಸ್ಫೋಟಕ್ಕೆ ಓರ್ವ ಬಲಿ, 6 ಮಂದಿಗೆ ಗಾಯ: ಬೆಚ್ಚಿಬೀಳಿಸಿದ ಸಿಸಿಟಿವಿ ದೃಶ್ಯಗಳು! - BLAST IN GUNPOWDER FACTORY