ಅಮರಾವತಿ, ಆಂಧ್ರಪ್ರದೇಶ: ಲೋಕಸಭಾ ಚುನಾವಣಾ ಫಲಿತಾಂಶದ ಜೊತೆಗೆ ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶವೂ ಪ್ರಕಟಗೊಂಡಿದ್ದು, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ವಿಜಯ ಪತಾಕೆ ಹಾರಿಸಿದ್ದಾರೆ. ಲೋಕಸಭೆಯಲ್ಲಿ ಟಿಡಿಪಿ 16 ಸ್ಥಾನಗಳನ್ನು ಗೆದ್ದರೆ ವೈಎಸ್ಆರ್ಸಿಪಿ ನಾಲ್ಕು ಸ್ಥಾನಗಳನ್ನಷ್ಟೇ ಪಡೆದಿದೆ. ಇನ್ನು ವಿಧಾನಸಭಾ ಚುನಾವಣೆಯಲ್ಲಿ 175 ಕ್ಷೇತ್ರಗಳ ಪೈಕಿ ಟಿಡಿಪಿ 135 ಕ್ಷೇತ್ರಗಳಲ್ಲಿ, ಮಿತ್ರಪಕ್ಷಗಳಾದ ಜನಸೇನಾ ಪಕ್ಷ 21 ಹಾಗೂ ಬಿಜೆಪಿ 8 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ. ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಕೇವಲ 11 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.
ಇದೀಗ ಟಿಡಿಪಿಯ ಅದ್ಧೂರಿ ಗೆಲುವು ಹಾಗೂ ವೈಎಸ್ಆರ್ಸಿಪಿಯ ಹೀನಾಯ ಸೋಲಿನ ಕುರಿತು ರಾಜಕೀಯ ಹಾಗೂ ಸಾರ್ವಜನಿಕ ವಲಯಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಅಧಿಕಾರದ ದುರುಪಯೋಗ ಹಾಗೂ ಸುಳ್ಳು ಆರೋಪಗಳ ಮೇಲೆ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿರುವುದೇ ಜಗನ್ ಮೋಹನ್ ರೆಡ್ಡಿ ಅವರ ಅವನತಿ ಹಾಗೂ ವೈಎಸ್ಆರ್ಸಿಪಿ ಸರ್ಕಾರದ ಪತನಕ್ಕೆ ಕಾರಣ. ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಚಂದ್ರಬಾಬು ನಾಯ್ಡು ಅವರ ಬಂಧನ ಆಂಧ್ರಪ್ರದೇಶದಾದ್ಯಂತ ಜನರನ್ನು ಕೆರಳಿಸಿತ್ತು. ಹಲವಾರು ಬೃಹತ್ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಈ ಎಲ್ಲವೂ ವೈಎಸ್ಆರ್ಸಿಪಿ ಸರ್ಕಾರದ ಪತನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಇದೀಗ ಲೋಕಸಭಾ ಹಾಗೂ ವಿಧಾನಸಭೆ ಚುನಾಚಣೆಗಳಲ್ಲಿ ಜನರು ತೋರಿಸಿರುವ ಫಲಿತಾಂಶವೇ, ಚಂದ್ರಬಾಬು ನಾಯ್ಡು ಅವರ ವಿರುದ್ಧ ವೈಎಸ್ಆರ್ಸಿಪಿ ಸರ್ಕಾರ ದಾಖಲಿಸಿರುವ ಪ್ರಕರಣಗಳಲ್ಲಿ ಹುರುಳಿಲ್ಲ ಎಂದು ಸಾಬೀತುಪಡಿಸಿವೆ. ಚಂದ್ರಬಾಬು ನಾಯ್ಡು ಅವರ ಬಂಧನದ ಸಮಯದಲ್ಲಿ ಆಂಧ್ರಪ್ರದೇಶ ಮಾತ್ರವಲ್ಲದೇ ನೆರೆಯ ರಾಜ್ಯಗಳ ಹೈದರಾಬಾದ್, ಬೆಂಗಳೂರು ಹಾಗೂ ಚೆನ್ನೈನಂತಹ ನಗರಗಳಲ್ಲಿ ರ‍್ಯಾಲಿ, ಪ್ರತಿಭಟನೆಗಳನ್ನು ನಡೆಸಿದ್ದರು.
ಸಾವಿರಾರು ಕೋಟಿ ಮೌಲ್ಯದ ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಜಗನ್ ಮೋಹನ್ ರೆಡ್ಡಿ 2019ರಲ್ಲಿ ಅಧಿಕಾರಕ್ಕೆ ಬಂದಿದ್ದರು. ನಂತರದಲ್ಲಿ ಚಂದ್ರಬಾಬು ನಾಯ್ಡು ಅವರ ಪ್ರತಿಷ್ಠೆಗೆ ಮಸಿ ಬಳಿಯುವಂತಹ ಕೆಲಸಕ್ಕೆ ಪ್ರಯತ್ನಿಸಿದರು. ಇದಿರಂದಾಗಿ 2023ರ ಸೆಪ್ಟೆಂಬರ್ 9 ರಂದು ಬೆಳಗ್ಗೆ 6 ಗಂಟೆಗೆ ಡಿಐಜಿ ರಘುರಾಮಿ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಚಂದ್ರಬಾಬು ನಾಯ್ಡು ಅವರನ್ನು ನಂದ್ಯಾಲ್ ಜಿಲ್ಲೆಯಲ್ಲಿ ಅತ್ಯಂತ ಅವಮಾನಕರ ರೀತಿಯಲ್ಲಿ ಬಂಧಿಸಿದ್ದರು. ವಿಜಯವಾಡದ ದಾರಿಯ ಮೂಲಕ ಅವರನ್ನು ಕರೆದೊಯ್ಯಲಾಗಿತ್ತು. ಬಂಧನದ ವಿಷಯ ತಿಳಿಯುತ್ತಿದ್ದಂತೆ ಟಿಡಿಪಿ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಬೀದಿಗಿಳಿದು ಪೊಲೀಸ್ ಬೆಂಗಾವಲು ಪಡೆಯನ್ನು ತಡೆಯಲು ಪ್ರಯತ್ನಿಸಿದ್ದರು.