ಕರ್ನಾಟಕ

karnataka

By ETV Bharat Karnataka Team

Published : Mar 9, 2024, 6:33 PM IST

ETV Bharat / bharat

ಬಿಜೆಪಿ ಜೊತೆ ಟಿಡಿಪಿ, ಜನಸೇನಾ ಮೈತ್ರಿ ಫೈನಲ್​: ಲೋಕಸಭೆ, ವಿಧಾನಸಭಾ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧೆ

ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲಕ್ಕೆ ನಡೆಯಲಿದ್ದು, ಬಿಜೆಪಿ, ಟಿಡಿಪಿ ಹಾಗೂ ಜನಸೇನಾ ಒಟ್ಟಿಗೆ ಸ್ಪರ್ಧಿಸಲಿವೆ.

Chandrababu Naidu's TDP, Pawan Kalyan's JanaSena Finalise Alliance With BJP
ಬಿಜೆಪಿ ಜೊತೆ ಟಿಡಿಪಿ, ಜನಸೇನಾ ಮೈತ್ರಿ ಫೈನಲ್

ನವದೆಹಲಿ: ಲೋಕಸಭೆ ಚುನಾವಣೆ ಮತ್ತು ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆಗೆ ಕೇಂದ್ರದ ಆಡಳಿತಾರೂಢ ಬಿಜೆಪಿ ಜೊತೆಗೆ ಟಿಡಿಪಿ ಮತ್ತು ಜನಸೇನಾ ಪಕ್ಷಗಳ ಮೈತ್ರಿ ಅಂತಿಮವಾಗಿದೆ. ದೆಹಲಿಯಲ್ಲಿ ಕಮಲ ಪಕ್ಷದ ಹಿರಿಯ ನಾಯಕ, ಗೃಹ ಸಚಿವ ಅಮಿತ್​ ಶಾ ಅವರನ್ನು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ಜನಸೇನಾ ಅಧ್ಯಕ್ಷ, ನಟ ಪವನ್​ ಕಲ್ಯಾಣ್ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಫಲಪ್ರದವಾಗಿದೆ.

ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲಕ್ಕೆ ನಡೆಯಲಿದೆ. ಗೃಹ ಸಚಿವ ಅಮಿತ್​ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಚಂದ್ರಬಾಬು ಇಂದು ಎರಡನೇ ಸುತ್ತಿನ ಮಾತುಕತೆ ನಡೆಸಿದರು. ಇದು ಯಶಸ್ವಿಯಾಗಿದ್ದು, ಎರಡೂ ಚುನಾವಣೆಗಳಲ್ಲಿ ಬಿಜೆಪಿ, ಟಿಡಿಪಿ ಹಾಗೂ ಜನಸೇನಾ ಒಟ್ಟಿಗೆ ಸ್ಪರ್ಧಿಸಲಿವೆ. ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ ಗುರುವಾರ ಕೂಡ ಅಮಿತ್​ ಶಾ ಮತ್ತು ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಇಂದು ಬಿಜೆಪಿ ನಾಯಕರ ಜೊತೆಗೆ ಮಾತುಕತೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಚಂದ್ರಬಾಬು, ತಮ್ಮ ಮೈತ್ರಿಕೂಟವು ಚುನಾವಣೆಯಲ್ಲಿ ಸ್ವೀಪ್ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ, ಚುನಾವಣೆಯಲ್ಲಿ ಬಿಜೆಪಿ, ಟಿಡಿಪಿ, ಜನಸೇನೆ ಮೈತ್ರಿ ಅಂತಿಮವಾಗಿರುವ ಬಗ್ಗೆ ಖಚಿತಪಡಿಸಿ ಮಾತನಾಡಿದ ಚಂದ್ರಬಾಬು ನಾಯ್ಡು, ಆಂಧ್ರ ಪ್ರದೇಶವನ್ನು ತುಂಬಾ ಕೆಟ್ಟದಾಗಿ ನಾಶ ಮಾಡಲಾಗಿದೆ. ಬಿಜೆಪಿ, ಟಿಡಿಪಿ ಒಗ್ಗೂಡಿ ದೇಶ, ರಾಜ್ಯದಲ್ಲಿ ಗೆಲುವಿನ ಸನ್ನಿವೇಶ ನಿರ್ಮಿಸಲಿವೆ ಎಂದೂ ತಿಳಿಸಿದರು.

ಇದಕ್ಕೂ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಬಂಡಾಯ ಸಂಸದ ಕೆ.ರಘು ರಾಮ ಕೃಷ್ಣರಾಜು ಮಾತನಾಡಿ, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಿಂದ ಜಗನ್ ಸರ್ಕಾರವನ್ನು ತೆಗೆದುಹಾಕಲು ಬಿಜೆಪಿ, ಟಿಡಿಪಿ ಮತ್ತು ಜನಸೇನಾ ಪಕ್ಷಗಳು ಒಟ್ಟಾಗುವುದು ಅತ್ಯಗತ್ಯ ಎಂದು ಹೇಳಿದರು.

ರಾಜ್ಯಸಭಾ ಸಂಸದ ರವೀಂದ್ರ ಕುಮಾರ್ ಮಾತನಾಡಿ, ಮೂರು ಪಕ್ಷಗಳ ಮುಖಂಡರು ಒಟ್ಟಾಗಿ ಅಧಿಕೃತವಾಗಿ ಮೈತ್ರಿ ಘೋಷಣೆ ಮಾಡಲಿದ್ದು, ಇನ್ನೊಂದು ಸಭೆಯ ನಂತರ ಜಂಟಿ ಪ್ರಣಾಳಿಕೆ ಹಾಗೂ ಪ್ರಚಾರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಸ್ಥಾನಗಳು ಹೊಂದಾಣಿಕೆ ಕುರಿತು ಚರ್ಚೆ ನಡೆದಿದ್ದು, ಈ ಬಗ್ಗೆ ಅಂತಿಮ ಸ್ಪಷ್ಟತೆ ದೊರೆತಿದೆ. ಮತ್ತೊಂದು ಸಭೆಯ ನಂತರ ಸ್ಪರ್ಧಿಸುವ ಸ್ಥಾನಗಳ ಕುರಿತು ಪ್ರಕಟಿಸಲಾಗುವುದು ಎಂದೂ ತಿಳಿದು ಬಂದಿದೆ.

ಇದನ್ನೂ ಓದಿ:ಕಮಲ್​ ಹಾಸನ್​​ ಜೊತೆ ಮೈತ್ರಿ ಮಾಡಿಕೊಂಡ ಡಿಎಂಕೆ: ಮಕ್ಕಳ್ ನೀಧಿ ಮೈಯಂಗೆ ರಾಜ್ಯಸಭೆಯಲ್ಲಿ ಒಂದು ಸ್ಥಾನ ನೀಡಲು ಒಪ್ಪಿಗೆ

ABOUT THE AUTHOR

...view details