ನವದೆಹಲಿ: ವಿಧಾನಸಭಾ ಚುನಾವಣೆ ಘೋಷಣೆಗೆ ಒಂದು ದಿನ ಮುಂಚಿತವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನನ್ನು ಅಧಿಕೃತ ಮುಖ್ಯಮಂತ್ರಿ ನಿವಾಸದಿಂದ ಹೊರಹಾಕಿದೆ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಮರ್ಲೆನಾ ಮಂಗಳವಾರ ಆರೋಪಿಸಿದ್ದಾರೆ.
"ಇಂದು ದೆಹಲಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಆದರೆ ಅದಕ್ಕೂ ಮುನ್ನ ಕಳೆದ ರಾತ್ರಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮೂರು ತಿಂಗಳಲ್ಲಿ ಎರಡನೇ ಬಾರಿಗೆ ನನ್ನನ್ನು ಸಿಎಂ ಅಧಿಕೃತ ನಿವಾಸದಿಂದ ಹೊರಹಾಕಿದೆ. ಕೇವಲ ಒಂದು ಪತ್ರ ಕಳುಹಿಸಿ ಅವರು ನನ್ನ ಮನೆ ಮಂಜೂರಿಯನ್ನು ರದ್ದುಗೊಳಿಸಿದ್ದಾರೆ. ಒಬ್ಬ ಚುನಾಯಿತ ಸರ್ಕಾರದ ಚುನಾಯಿತ ಮುಖ್ಯಮಂತ್ರಿಯ ನಿವಾಸವನ್ನು ಅವರು ಕಸಿದುಕೊಂಡಿದ್ದಾರೆ" ಎಂದು ಅತಿಶಿ ಪಿಟಿಐಗೆ ತಿಳಿಸಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮುಖ್ಯಮಂತ್ರಿ ಅತಿಶಿ, "ಅವರು ಮೂರು ತಿಂಗಳ ಹಿಂದೆಯೂ ಇದೇ ಕೆಲಸ ಮಾಡಿದ್ದರು. ನಾನು ಸಿಎಂ ಆಗಿ ಆಯ್ಕೆಯಾದಾಗ ನನ್ನ ಮತ್ತು ನನ್ನ ಕುಟುಂಬದ ಆಸ್ತಿಪಾಸ್ತಿಗಳನ್ನು ಬೀದಿಗೆ ಎಸೆಯಲಾಯಿತು. ನಮ್ಮ ಮನೆಗಳನ್ನು ಕಸಿದುಕೊಳ್ಳುವ ಮೂಲಕ, ನಮ್ಮನ್ನು ನಿಂದಿಸುವ ಮೂಲಕ ಮತ್ತು ನಮ್ಮ ಕುಟುಂಬದ ಬಗ್ಗೆ ಕೀಳುಮಟ್ಟದ ಹೇಳಿಕೆಗಳನ್ನು ನೀಡುವ ಮೂಲಕ ಅವರು ನಾವು ಕೆಲಸ ಮಾಡದಂತೆ ತಡೆಯಬಹುದು ಅಂದುಕೊಂಡಿದ್ದಾರೆ. ಆದರೆ, ಅವರು ನಮ್ಮ ಮನೆಯನ್ನು ಕಸಿದುಕೊಂಡರೂ ನಾವು ಜನರಿಗಾಗಿ ಕೆಲಸ ಮಾಡುವುದನ್ನು ನಿಲ್ಲಿಸುವುದಿಲ್ಲ" ಎಂದರು.