ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ಇಲಾಖೆ ಸಚಿವೆ ಸ್ಮೃತಿ ಇರಾನಿ ಅವರು ಹಜ್ 2024ರ ಮಾರ್ಗಸೂಚಿ ಮತ್ತು ಹಜ್ ಸುವಿಧಾ ಮೊಬೈಲ್ ಅಪ್ಲಿಕೇಷನ್ ಅನ್ನು ಭಾನುವಾರ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಹಜ್ ಯಾತ್ರೆ ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರದ ಅನೇಕ ಸಚಿವಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಹಜ್ ಯಾತ್ರಿಕರಿಗೆ ಸೌಲಭ್ಯ ಒದಗಿಸುವುದೊಂದೇ ಅಲ್ಪಸಂಖ್ಯಾತ ಸಚಿವರ ಜವಾಬ್ದಾರಿ ಅಲ್ಲ. ಇದೀಗ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಯಾತ್ರಿಕರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಲ್ಲಾ ವಿಭಾಗದೊಂದಿಗೆ ಸಹಕಾರವನ್ನು ಸ್ಥಾಪಿಸುತ್ತಿದೆ. ಯಾತ್ರೆಗಾಗಿ 5 ಸಾವಿರಕ್ಕೂ ಹೆಚ್ಚು ಮಹಿಳೆಯರು, ಮೆಹ್ರಮ್ ಹೊರತಾದ ಮಹಿಳೆಯರು (ಎಲ್ಡಬ್ಲ್ಯೂಎಂ) ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ವರ್ಷ 4,300 ಮಹಿಳೆಯರು ವೈಯಕ್ತಿಕವಾಗಿ ಹಜ್ ಯಾತ್ರೆ ಕೈಗೊಂಡಿದ್ದರು. ಈ ವರ್ಷ ಸಂಖ್ಯೆ 5,160 ದಾಟಿದೆ. ಯಾತ್ರಿಕರಿಗೆ ಹಜ್ ಯಾತ್ರೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಹಜ್ ಸುವಿಧಾ ಮೊಬೈಲ್ ಆ್ಯಪ್ ಮೂಲಕ ಯಾತ್ರಿಕರು ಯಾವುದೇ ಅಗತ್ಯವಿದ್ದಲ್ಲಿ ತಮ್ಮ ಸ್ಥಳದಿಂದಲೇ ಅಧಿಕಾರಿಗಳಿಂದ ಸಹಾಯ ಪಡೆಯಬಹುದು. ಈ ಆ್ಯಪ್ ಮೂಲಕ ಯಾತ್ರಾರ್ಥಿಗಳು ತಮ್ಮ ಸ್ಥಳದ ಸಮೀಪದ ಆರೋಗ್ಯ ಸೌಲಭ್ಯವನ್ನು ಅಗತ್ಯ ಸಮಯದಲ್ಲಿ ಪಡೆಯಬಹುದು ಎಂದರು.