ನವದೆಹಲಿ:ಬಹುನಿರೀಕ್ಷಿತ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ-ಎನ್‌ಪಿಆರ್ ನವೀಕರಣ ಮುಂದಿನ ವರ್ಷ ಪ್ರಾರಂಭವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 2026ರವರೆಗೆ ಈ ಪ್ರಕ್ರಿಯೆ ನಡೆಯಲಿದೆ. ವರ್ಷದ ಕೊನೆಯಲ್ಲಿ ವಿವರಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದರ ಜೊತೆಗೆ, ಜನಗಣತಿ ನಡೆಸುವ ಚಕ್ರವೂ ಬದಲಾಗಲಿದೆ. ಅಂದರೆ ಈ ಗಣತಿಯನ್ನು 2025-2035ರ ನಡುವಿನ ಲೆಕ್ಕಾಚಾರ ಮಾಡಿದರೆ, ಮುಂದಿನ ಬಾರಿ 2035-2045ರ ಅವಧಿಯಲ್ಲಿ ಎಣಿಕೆ ಮಾಡಬೇಕಾಗುತ್ತದೆ. ಈ ಮಧ್ಯೆ, ಜಾತಿ ಗಣತಿ ಬಗ್ಗೆ ಸರ್ಕಾರ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.
ಗಣತಿಯಲ್ಲಿ ಕೇಳುವ ಪ್ರಶ್ನೆಗಳೇನು?:ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯು ಈಗಾಗಲೇ 31 ಪ್ರಶ್ನೆಗಳನ್ನು ಸಿದ್ಧಪಡಿಸಿದೆಯಂತೆ. ಅವನ್ನು ಈ ಗಣತಿಯಲ್ಲಿ ಜನರಿಗೆ ಕೇಳಲಾಗುತ್ತದೆ. ಹಿಂದಿನ ಜನಗಣತಿಯಲ್ಲಿ ಕುಟುಂಬದ ಮುಖ್ಯಸ್ಥರು, ಯಾವ ವರ್ಗ, ಕುಟುಂಬದಲ್ಲಿ ವಾಸಿಸುವ ಜನರ ಸಂಖ್ಯೆ, ಕುಟುಂಬದ ಮುಖ್ಯಸ್ಥರು ಯಾರು? (ಹೆಣ್ಣು-ಗಂಡು), ಮನೆಯಲ್ಲಿರುವ ಕೋಣೆಗಳ ಸಂಖ್ಯೆ, ವಿವಾಹಿತ ದಂಪತಿ ಸಂಖ್ಯೆ ಸೇರಿದಂತೆ ಮುಂತಾದ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಇದರ ಜೊತೆಗೆ, ಮನೆಯವರ ದೂರವಾಣಿ, ಇಂಟರ್ನೆಟ್ ಸಂಪರ್ಕ, ಮೊಬೈಲ್/ಸ್ಮಾರ್ಟ್‌ಫೋನ್, ಬೈಸಿಕಲ್, ಸ್ಕೂಟರ್ ಅಥವಾ ಮೋಟಾರ್ ಸೈಕಲ್, ಮೊಪೆಡ್, ಕಾರು, ಜೀಪ್ ಅಥವಾ ವ್ಯಾನ್ ಹೊಂದಿರುವ ಬಗ್ಗೆ ಪ್ರಶ್ನೆಗಳು ಬರಲಿವೆ.
ಜನ ಗಣತಿಯಲ್ಲಿ ಕೇಳುವ ಇತರ ಪ್ರಶ್ನೆಗಳಿವು
- ಮನೆಯಲ್ಲಿ ಯಾವ ಧಾನ್ಯಗಳ ಬಳಕೆ ಮಾಡಲಾಗುತ್ತದೆ
- ಕುಡಿಯುವ ನೀರಿನ ಪ್ರಮುಖ ಮೂಲಗಳ ವಿವರ
- ವಿದ್ಯುತ್ ಸಂಪರ್ಕದ ಮೂಲವೇನು?
- ಶೌಚಾಲಯ ಮತ್ತು ಅದರ ಪ್ರಕಾರವೇನು?
- ತ್ಯಾಜ್ಯ ನೀರು ನಿರ್ವಹಣೆ ಸೌಲಭ್ಯ, ಸ್ನಾನಗೃಹದ ಸೌಲಭ್ಯಗಳ ಲಭ್ಯತೆ
- ಅಡುಗೆ ಮನೆ, ಎಲ್ಪಿಜಿ/ಪಿಎನ್ಜಿ ಸಂಪರ್ಕದ ಲಭ್ಯತೆ, ಅಡುಗೆಗೆ ಬಳಸುವ ಮುಖ್ಯ ಇಂಧನ
- ರೇಡಿಯೋ, ಟ್ರಾನ್ಸಿಸ್ಟರ್, ಟಿವಿ ಇತ್ಯಾದಿಗಳ ಲಭ್ಯತೆ
ಲೋಕಸಭೆ ಕ್ಷೇತ್ರ ಪುನರ್ವಿಂಗಡಣೆ:ಜನಗಣತಿಯ ನಂತರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಯಲಿದೆ. 2028ರ ವೇಳೆಗೆ ಇದನ್ನು ಮುಗಿಸುವ ಸಾಧ್ಯತೆ ಇದೆ. ಜನಸಂಖ್ಯೆ ಅನುಗುಣವಾಗಿ ಪುನರ್ವಿಂಗಡಣೆ ನಡೆದಲ್ಲಿ ಸ್ಥಾನಗಳು ಕಳೆದುಕೊಳ್ಳುವ ಬಗ್ಗೆ ದಕ್ಷಿಣ ಭಾರತದ ರಾಜ್ಯಗಳು ಆತಂಕಕ್ಕೀಡಾಗಿವೆ. ಜನಸಂಖ್ಯೆ ನಿಯಂತ್ರಣ ಮಾಡಿರುವ ಈ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳೂ ಸಹಜವಾಗಿ ಕಡಿಮೆಯಾಗಲಿವೆ. ಇದರಿಂದ ದೇಶದ ರಾಜಕೀಯದಲ್ಲಿ ದಕ್ಷಿಣದ ಪ್ರಾಮುಖ್ಯತೆ ಕಡಿಮೆಯಾಗಲಿದೆ ಎಂಬುದು ಈ ಭಾಗದ ಕಳವಳವಾಗಿದೆ.
ಜಾತಿ ಗಣತಿಗಾಗಿ ಪ್ರತಿಪಕ್ಷಗಳ ಪಟ್ಟು:ಆರ್‌ಜೆಡಿ, ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳು ಜನಗಣತಿಯ ಜೊತೆಗೆ ಜಾತಿ ಗಣತಿ ನಡೆಸುವಂತೆಯೂ ಒತ್ತಾಯಿಸುತ್ತಿವೆ. ಈ ಬಾರಿ ನಡೆಯಲಿರುವ ಜನಗಣತಿಯಲ್ಲಿ ಜಾತಿ ಗಣತಿ ಸೇರಿದೆಯೇ ಅಥವಾ ಲೋಕಸಭೆಯಲ್ಲಿ ರಾಜ್ಯಗಳ ಪ್ರಾತಿನಿಧ್ಯವನ್ನು ಇದೇ ಲೆಕ್ಕಾಚಾರ ಬಳಸಲಾಗುವುದೇ ಎಂಬುದರ ಬಗ್ಗೆ ಕೇಂದ್ರಕ್ಕೆ ಕಾಂಗ್ರೆಸ್ ಸ್ಪಷ್ಟನೆ ಕೇಳಿದೆ. ಈ ಬಗ್ಗೆ ಸರ್ವಪಕ್ಷ ಸಭೆ ಕರೆಯುವಂತೆಯೂ ಸೂಚಿಸಲಾಗಿದೆ.
ಇದನ್ನೂ ಓದಿ:ಆ ಮೂರು ದೇಶಗಳಿಂದ 'ಡಿಜಿಟಲ್ ಅರೆಸ್ಟ್' ವಂಚನೆ: ₹120 ಕೋಟಿ ಕಳೆದುಕೊಂಡ ಭಾರತೀಯರು