ಮುಂಬೈ: ಶಿವಸೇನೆ (ಯುಬಿಟಿ) ಮಾಜಿ ಕಾರ್ಪೊರೇಟರ್ ಅಭಿಷೇಕ್ ಘೋಸಾಲ್ಕರ್ ಹತ್ಯೆ ಪ್ರಕರಣದ ತನಿಖೆಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಸಿಬಿಐಗೆ ವರ್ಗಾಯಿಸಿದೆ. ಪ್ರಕರಣದಲ್ಲಿ ಪೊಲೀಸರು ಕೆಲ ಆಯಾಮಗಳಲ್ಲಿ ತನಿಖೆ ನಡೆಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣದಲ್ಲಿ ನಗರ ಪೊಲೀಸರು ನಡೆಸುತ್ತಿರುವ ತನಿಖೆಯ ಸಾಚಾತನದ ಬಗ್ಗೆ ಶಂಕೆ ವ್ಯಕ್ತಪಡಿಸಿ ಘೋಸಾಲ್ಕರ್ ಅವರ ಪತ್ನಿ ತೇಜಸ್ವಿ ಘೋಸಾಲ್ಕರ್ ಸಲ್ಲಿಸಿದ್ದ ಮನವಿಯ ಬಗ್ಗೆ ನ್ಯಾಯಮೂರ್ತಿ ರೇವತಿ ಮೋಹಿತೆ ಡೇರೆ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
"ಈ ಪ್ರಕರಣದಲ್ಲಿ ಪೊಲೀಸರು ಕೆಲ ಆಯಾಮಗಳಲ್ಲಿ ತನಿಖೆಯನ್ನೇ ನಡೆಸಿಲ್ಲ. ಪುನಃ ಇಂತಹ ಲೋಪಗಳಿಗೆ ಅವಕಾಶ ಮಾಡಿಕೊಡಲಾಗದು. ಹೀಗೆಯೇ ಮುಂದುವರಿದರೆ ಇದು ನ್ಯಾಯದಾನಕ್ಕೆ ಅಡ್ಡಿಯಾಗಬಹುದು" ಎಂದು ನ್ಯಾಯಾಲಯ ಹೇಳಿದೆ. ಮುಂಬೈ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ ಮತ್ತು ತನಿಖೆ ತೃಪ್ತಿಕರವಾಗಿಲ್ಲ ಎಂದು ಆರೋಪಿಸಿ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಲಾಗಿತ್ತು.
ಫೆಬ್ರವರಿ 8 ರಂದು ಫೇಸ್ ಬುಕ್ ಲೈವ್ ಸೆಷನ್ನಲ್ಲಿ ಸ್ಥಳೀಯ ಉದ್ಯಮಿ ಮೌರಿಸ್ ನೊರೊನ್ಹಾ ಅವರು ಘೋಸಾಲ್ಕರ್ ಅವರನ್ನು ಬೋರಿವಿಲಿಯ ಕಚೇರಿಯಲ್ಲಿ ಗುಂಡಿಕ್ಕಿ ಕೊಂದಿದ್ದರು. ಸ್ವಲ್ಪ ಸಮಯದ ನಂತರ ನೊರೊನ್ಹಾ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಪೊಲೀಸರು ನೊರೊನ್ಹಾ ಅವರ ಅಂಗರಕ್ಷಕ ಅಮರೇಂದ್ರ ಸಿಂಗ್ ಅವನನ್ನು ಬಂಧಿಸಿದ್ದಾರೆ. ಅಮರೇಂದ್ರ ಸಿಂಗ್ ಅವರ ಪಿಸ್ತೂಲ್ನಿಂದಲೇ ದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ. ಸದ್ಯ ಈತ ಜಾಮೀನಿನ ಮೇಲೆ ಹೊರಗಿದ್ದಾನೆ.