ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ಅವರ ನಿವಾಸ ಸೇರಿದಂತೆ 29 ಸ್ಥಳಗಳ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದೆ. ಕಿರು ಹೈಡ್ರೊ ಎಲೆಕ್ಟ್ರಿಕ್ ಯೋಜನೆಯ ಸಿವಿಲ್ ಕಾಮಗಾರಿಗಳನ್ನು ನೀಡುವಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಅದರ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.
2,200 ಕೋಟಿ ರೂಪಾಯಿ ಮೌಲ್ಯದ ಕಿರು ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ರಾಜೆಕ್ಟ್ (ಎಚ್‌ಇಪಿ) ಗಾಗಿ ಸಿವಿಲ್ ಕಾಮಗಾರಿಗಳ ಹಂಚಿಕೆಯಲ್ಲಿ ಭಾರಿ ಭ್ರಷ್ಟಾಚಾರದ ಆರೋಪದ ಮೇಲೆ ವಿವಿಧ ನಗರಗಳಲ್ಲಿನ ಮಲಿಕ್ ಅವರಿಗೆ ಸೇರಿದ 30 ಸ್ಥಳಗಳಲ್ಲಿ ಸುಮಾರು 100 ಸಿಬಿಐ ಅಧಿಕಾರಿಗಳು ಇಂದು ಮುಂಜಾನೆಯಿಂದ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಜಮ್ಮು ಕಾಶ್ಮೀರದ ಮಾಜಿ ಗವರ್ನರ್ ಮಲಿಕ್ ಅವರು ಯೋಜನೆಗೆ ಸಂಬಂಧಿಸಿದ ಕಡತಗಳನ್ನು ವಿಲೇವಾರಿ ಮಾಡಲು 300 ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸಿಬಿಐ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. 2019 ರಲ್ಲಿ ಖಾಸಗಿ ಕಂಪನಿಯೊಂದಕ್ಕೆ ಕಿರು ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ರಾಜೆಕ್ಟ್ (ಎಚ್‌ಇಪಿ) ಅನ್ನು ಗುತ್ತಿಗೆ ನೀಡುವಲ್ಲಿ ಈ ಅವ್ಯವಹಾರದ ಆರೋಪ ಕೇಳಿ ಬಂದಿದೆ.