ಕರ್ನಾಟಕ

karnataka

ETV Bharat / bharat

'ಶೌರ್ಯ ಚಕ್ರ' ಪುರಸ್ಕೃತ ಶಿಕ್ಷಕನ ಹತ್ಯೆಯ ಹಿಂದೆ ಕೆನಡಾ ಖಲಿಸ್ತಾನಿ ಉಗ್ರರ ಕೈವಾಡ: ಸುಪ್ರೀಂಗೆ ಎನ್​ಐಎ ಮಾಹಿತಿ - NIA

2020ರಲ್ಲಿ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕನ ಹತ್ಯೆಯ ಹಿಂದೆ ಕೆನಡಾ ಮೂಲದ ಖಲಿಸ್ತಾನಿ ಉಗ್ರರ ಕೈವಾಡ ಇದೆ ಎಂದು ಎನ್​​ಐಎ ಸುಪ್ರೀಂ ಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಿದೆ.

ಶಿಕ್ಷಕನ ಹತ್ಯೆ ಹಿಂದೆ ಕೆನಡಾ ಖಲಿಸ್ತಾನಿ ಉಗ್ರರ ಕೈವಾಡ
ಹೈಕೋರ್ಟ್‌ (ETV Bharat)

By ETV Bharat Karnataka Team

Published : Oct 16, 2024, 10:49 PM IST

ನವದೆಹಲಿ:ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿರುವ ನಡುವೆ, ಕೆನಡಾ ಮೂಲದ ಖಲಿಸ್ತಾನಿ ಉಗ್ರರ ಮೇಲೆ ಭಾರತ ಮತ್ತೊಂದು ಆರೋಪ ಹೊರಗೆಡವಿದೆ.

2020ರಲ್ಲಿ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಲ್ವಿಂದರ್ ಸಿಂಗ್ ಸಂಧು ಅವರ ಹತ್ಯೆಯ ಹಿಂದೆ ಕೆನಡಾ ಮೂಲದ ಖಲಿಸ್ತಾನಿ ಉಗ್ರರ ಕೈವಾಡವಿದೆ ಎಂದು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸುಪ್ರೀಂ ಕೋರ್ಟ್‌ಗೆ ಬುಧವಾರ ಮಾಹಿತಿ ನೀಡಿದೆ.

ಶಿಕ್ಷಕ ಸಂಧು ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಹರ್ಭಿಂದರ್ ಸಿಂಗ್, ಸುಖ್ಮೀತ್ ಪಾಲ್ ಸಿಂಗ್ ಜಾಮೀನು ಕೋರಿ ಸುಪ್ರೀಂ ಕೋರ್ಟ್​ ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿ ವಿರುದ್ಧವಾಗಿ ಎನ್‌​ಐಎ ಸುಪ್ರೀಂ ಕೋರ್ಟ್​ಗೆ ಅಫಿಡವಿಟ್​ ಸಲ್ಲಿಸಿತ್ತು. ಅದರಲ್ಲಿ ಕೆನಡಾ ಮೂಲದ ಖಲಿಸ್ತಾನ ಉಗ್ರರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದೆ. ಇದರ ಬೆನ್ನಲ್ಲೇ, ಕೋರ್ಟ್​ ಜಾಮೀನು ನಿರಾಕರಿಸಿದೆ.

ಎನ್​ಐಎ ಆರೋಪವೇನು?:2020ರಲ್ಲಿ ಪಂಜಾಬ್‌ನಲ್ಲಿ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಲ್ವಿಂದರ್ ಸಿಂಗ್ ಸಂಧು ಅವರನ್ನು ಹತ್ಯೆ ಮಾಡಲಾಗಿತ್ತು. ಸಂಧು ಹತ್ಯೆಗೆ ಖಲಿಸ್ತಾನಿ ಲಿಬರೇಶನ್​ ಫೋರ್ಸ್​ನ (ಕೆಎಲ್​​ಎಫ್​) ಸದಸ್ಯರಾದ ಕೆನಡಾದ ಸನ್ನಿ ಟೊರೊಂಟೊ ಮತ್ತು ಲಖ್ವೀರ್ ಸಿಂಗ್ ರೋಡ್ ಸಂಚು ರೂಪಿಸಿದ್ದರು. ಭಾರತದಲ್ಲಿ ಖಲಿಸ್ತಾನಿ ವಿರೋಧಿಗಳನ್ನು ಹತ್ಯೆ ಮಾಡುವುದು ಮತ್ತು ಮತ್ತೆ ಖಲಿಸ್ತಾನ್​ ಹೋರಾಟವನ್ನು ಮುನ್ನಲೆಗೆ ತರುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಎನ್​​ಐಎ ಅಫಿಡವಿಟ್​​ನಲ್ಲಿ ಹೇಳಿದೆ.

ಈ ಉದ್ದೇಶದಿಂದಾಗಿ ರೋಡ್ ಮತ್ತು ಟೊರಾಂಟೊ ಸಂಧು ಹತ್ಯೆಗೆ ಸ್ಕೆಚ್​​ ರೂಪಿಸಿದ್ದರು. ಅದನ್ನು ಆರೋಪಿಗಳಾದ ಸುಖ್ಮೀತ್ ಪಾಲ್ ಸಿಂಗ್ ಅಲಿಯಾಸ್ ಸುಖ್ ಭಿಖಾರಿವಾಲ್, ಹರ್ಭಿಂದರ್ ಸಿಂಗ್ ಅವರನ್ನು ಸಂಪರ್ಕಿಸಿದ್ದರು. ಬಳಿಕ ಹತ್ಯೆ ನಡೆಸಲಾಗಿದೆ. ಇದನ್ನು ಆರೋಪಿಗಳೇ ಬಾಯ್ಬಿಟ್ಟಿದ್ದಾರೆ. ಸನ್ನಿ ಟೊರಾಂಟೋ, ಕೆನಡಾದಲ್ಲಿ ಸಕ್ರಿಯವಾಗಿರುವ ಖಲಿಸ್ತಾನಿ ಲಿಬರೇಶನ್​ ಫೋರ್ಸ್​ನ ಆಪರೇಟಿವ್​ ಆಗಿದ್ದರೆ, ಲಖ್ವೀರ್​​ ಸಿಂಗ್​ ಆಲಿಯಾಸ್​ ರೋಡ್​​ ಈತ ಖಲಿಸ್ತಾನಿ ಲಿಬರೇಶನ್​ ಫೋರ್ಸ್​ನ ಮುಖ್ಯಸ್ಥ ಜರ್ನೆಲ್​​ ಸಿಂಗ್​​ ಭಿಂದ್ರಾವಾಲನ ಸಂಬಂಧಿಯಾಗಿದ್ದಾನೆ ಎಂದು ಎನ್​​ಐಎ ಹೇಳಿದೆ.

ಪಂಜಾಬ್‌ನಲ್ಲಿ ಖಲಿಸ್ತಾನಿ ಹೋರಾಟ ಉತ್ತುಂಗದಲ್ಲಿದ್ದಾಗ ಭಯೋತ್ಪಾದಕರ ವಿರುದ್ಧ ಶಿಕ್ಷಕ ಬಲ್ವಿಂದರ್ ಸಿಂಗ್ ಸಂಧು ಅವರು ಕೆಚ್ಚೆದೆಯ ಹೋರಾಟ ಮಾಡಿದ್ದರು. ಇದಕ್ಕಾಗಿ ಅವರಿಗೆ ಏಪ್ರಿಲ್ 14, 1993ರಂದು ರಾಷ್ಟ್ರಪತಿಗಳು ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದ್ದರು.

ಖಲಿಸ್ತಾನ ವಿರುದ್ಧ ಹೋರಾಡಿದ ಸಂಧು ಅವರನ್ನು ಆರೋಪಿಗಳಾದ ಹರ್ಭಿಂದರ್ ಸಿಂಗ್, ಇಂದರ್‌ಜಿತ್ ಸಿಂಗ್ ಅವರು ಹತ್ಯೆ ಮಾಡಿದ್ದರು. ಸಂಧು ಅವರು ಶಾಲೆ ಮುಗಿಸಿಕೊಂಡು ಮನೆಗೆ ಬಂದ ಬಳಿಕ, ಇದನ್ನೇ ಕಾಯುತ್ತಿದ್ದ ಉಗ್ರರು ಅವರ ಮನೆಯಲ್ಲೇ ಗುಂಡು ಹಾರಿಸಿ ಕೊಂದಿದ್ದರು.

ಇದನ್ನೂ ಓದಿ:ಭಾರತ, ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣ, ಹಿನ್ನೆಲೆಯೇನು? ಸಂಪೂರ್ಣ ಮಾಹಿತಿ

ABOUT THE AUTHOR

...view details