ಕರ್ನಾಟಕ

karnataka

ETV Bharat / bharat

7 ಕೃಷಿ ಸಂಬಂಧಿತ ಯೋಜನೆಗಳಿಗೆ ₹13,966 ಕೋಟಿ ಅನುಮೋದನೆಗೆ ಒಪ್ಪಿದ ಕೇಂದ್ರ ಸಂಪುಟ - Cabinet approves seven schemes - CABINET APPROVES SEVEN SCHEMES

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ 7 ಪ್ರಮುಖ ಕೃಷಿ ಸಂಬಂಧಿತ ಯೋಜನೆಗಳಿಗೆ ಒಟ್ಟು 13,966 ಕೋಟಿ ರೂಪಾಯಿ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ.

ಕೇಂದ್ರ ಸಚಿವ ಸಂಪುಟ
ಕೇಂದ್ರ ಸಚಿವ ಸಂಪುಟ (ANI)

By ANI

Published : Sep 2, 2024, 6:26 PM IST

ನವದೆಹಲಿ:ಏಳು ಮಹತ್ವಾಕಾಂಕ್ಷಿ ಕೃಷಿ ಸಂಬಂಧಿತ ಯೋಜನೆಗಳಿಗೆ 13,966 ಕೋಟಿ ರೂಪಾಯಿ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗಳಿಗೆ ಹಣಕಾಸಿನ ಒಪ್ಪಿಗೆ ಸೂಚಿಸಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್​​, ಕೇಂದ್ರ ಸರ್ಕಾರ ಕೃಷಿಯಲ್ಲಿ ಮಹತ್ತರ ಬದಲಾವಣೆ ತರಲು ಮತ್ತು ಕೃಷಿ ಶಿಕ್ಷಣವನ್ನು ಪಸರಿಸಲು 7 ಮಹತ್ತರ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿದೆ. ಸುಸ್ಥಿರತೆ, ಆದಾಯ ಗಳಿಕೆ ಹೆಚ್ಚಳ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವದ ಮೇಲೆ ಕೇಂದ್ರೀಕರಿಸುವ ಮೂಲಕ ಕೃಷಿಯಲ್ಲಿನ ವಿವಿಧ ಸವಾಲುಗಳನ್ನು ಪರಿಹರಿಸಲು ಈ ಯೋಜನೆಗಳು ನೆರವಾಗಲಿವೆ ಎಂದು ಹೇಳಿದ್ದಾರೆ.

ಯಾವ ಯೋಜನೆಗಳಿಗೆ ಎಷ್ಟು ಅನುದಾನ?:ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟಕ್ಚರ್​ ಅಡಿಪಾಯದ ಮೇಲೆ ರೈತರ ಜೀವನವನ್ನು ಸುಧಾರಿಸಲು ಡಿಜಿಟಲ್ ಅಗ್ರಿಕಲ್ಚರ್ ಮಿಷನ್​ಗಾಗಿ 2,817 ಕೋಟಿ ರೂಪಾಯಿ ಹಂಚಿಕೆಗೆ ಸರ್ಕಾರ ಒಪ್ಪಿದೆ. ಈ ಯೋಜನೆಯಡಿ ಕೃಷಿ ಪದ್ಧತಿಯಲ್ಲಿ ಕೃತಕ ಬುದ್ಧಿಮತ್ತೆ (AI), ದತ್ತಾಂಶ ಮತ್ತು ಜಿಯೋಸ್ಪೇಷಿಯಲ್ ತಂತ್ರಜ್ಞಾನಗಳಂತಹ ಸಾಧನಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಗಾಗಿ ಬೆಳೆ ವಿಜ್ಞಾನಕ್ಕೆ 3,979 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ಈ ಯೋಜನೆಯು ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಮತ್ತು 2047 ರ ವೇಳೆಗೆ ಬೆಳೆಗಳ ಪೌಷ್ಟಿಕಾಂಶವನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಆಹಾರ, ಮೇವು, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ವಾಣಿಜ್ಯ ಬೆಳೆಗಳ ಸುಧಾರಣೆ ಮತ್ತು ಸಂಪನ್ಮೂಲ ನಿರ್ವಹಣೆಯ ಮೇಲೆ ಗಮನ ಹರಿಸುವುದರೊಂದಿಗೆ ಕೃಷಿ ಸಂಶೋಧನೆ ಮತ್ತು ಶಿಕ್ಷಣವನ್ನು ಬಲಪಡಿಸಲು ಒತ್ತು ನೀಡುತ್ತದೆ.

ಕೃಷಿ ಶಿಕ್ಷಣ, ನಿರ್ವಹಣೆ ಮತ್ತು ಬಲವರ್ಧನೆ ಯೋಜನೆಗಾಗಿ ಸಚಿವ ಸಂಪುಟವು 2,291 ಕೋಟಿ ರೂಪಾಯಿಗೆ ಅನುಮೋದನೆ ನೀಡಿದೆ. ಇದರಿಂದ ಅಗತ್ಯವಿರುವ ಕೌಶಲ್ಯಗಳೊಂದಿಗೆ ಮುಂದಿನ ಪೀಳಿಗೆಯ ಕೃಷಿ ವೃತ್ತಿಪರರನ್ನು ಸಜ್ಜುಗೊಳಿಸಲು ಪ್ರಯತ್ನಿಸುತ್ತದೆ.

ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಜಾನುವಾರು ಮತ್ತು ಹೈನುಗಾರಿಕೆಯು ಪ್ರಮುಖವಾಗಿದ್ದು, ಇದನ್ನು ಮನಗಂಡಿರುವ ಕೇಂದ್ರ ಸಚಿವ ಸಂಪುಟವು 1,702 ಕೋಟಿ ರೂಪಾಯಿಗಳನ್ನು ಜಾನುವಾರು ಆರೋಗ್ಯ ಮತ್ತು ಉತ್ಪಾದನೆ ಯೋಜನೆಗೆ ಅನುಮೋದನೆ ನೀಡಿದೆ. ತೋಟಗಾರಿಕೆಯ ಅಭಿವೃದ್ಧಿ ಯೋಜನೆಗೆ 860 ಕೋಟಿ ರೂಪಾಯಿಗಳಿಗೆ ಕೇಂದ್ರ ಸಂಪುಟ ಅಸ್ತು ಎಂದಿದೆ.

ಇದರ ಜೊತೆಗೆ ಕೃಷಿ ವಿಜ್ಞಾನ ಕೇಂದ್ರಗಳ ಬಲವರ್ಧನೆಗೆ ಸಚಿವ ಸಂಪುಟವು 1,202 ಕೋಟಿ ರೂಪಾಯಿ ನೀಡಲು ಒಪ್ಪಿದೆ. ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಯೋಜನೆಗೆ 1,115 ಕೋಟಿ ರೂಪಾಯಿಗಳ ಬಜೆಟ್‌ ಬಿಡುಗಡೆಗೂ ಸಂಪುಟ ಸಮ್ಮತಿಸಿದೆ.

ಇದನ್ನೂ ಓದಿ:ಕ್ರಿಮಿನಲ್​ ಕೇಸಲ್ಲಿ ಆರೋಪಿಯಾಗಿದ್ದರೆ, ಮನೆ ಕೆಡವುತ್ತೀರಾ?: ಆಪರೇಷನ್​​ ಬುಲ್ಡೋಜರ್​​ ಕ್ರಮಕ್ಕೆ ಸುಪ್ರೀಂಕೋರ್ಟ್​ ಬೇಸರ - SC ON BULLDOZER ACTION

ABOUT THE AUTHOR

...view details