ನವದೆಹಲಿ: ಮುಂಗಾರು ಹಂಗಾಮಿನ ಭತ್ತ, ರಾಗಿ, ಜೋಳ, ಸಜ್ಜೆ, ಮೆಕ್ಕೆಜೋಳ ಮತ್ತು ಹತ್ತಿ ಸೇರಿದಂತೆ 14 ಬೆಳೆಗಳಿಗೆ ಕೇಂದ್ರ ಸರ್ಕಾರ ಬುಧವಾರ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಎಂಎಸ್‌ಪಿಗೆ ಅನುಮೋದನೆ ನೀಡಿತು.
ಖಾರಿಫ್ ಬೆಳೆಗಳಿಗೆ ಎಂಎಸ್‌ಪಿ, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಭಿವೃದ್ಧಿ, ಮಹಾರಾಷ್ಟ್ರದಲ್ಲಿ 76,000 ಕೋಟಿ ರೂ. ವೆಚ್ಚದ ವಧವನ್ ಬಂದರು ಯೋಜನೆ ಸೇರಿದಂತೆ ಐದು ಪ್ರಮುಖ ನಿರ್ಧಾರಗಳನ್ನು ಕೇಂದ್ರ ಸಂಪುಟ ತೆಗೆದುಕೊಂಡಿದೆ.
ಖಾರಿಫ್ ಹಂಗಾಮು ಆರಂಭವಾಗುತ್ತಿದ್ದು, ರೈತರ ಹಿತದೃಷ್ಟಿಯಿಂದ 14 ಬೆಳೆಗಳ ಎಂಎಸ್‌ಪಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಎಂಎಸ್ಪಿಯಿಂದ ಸರ್ಕಾರಕ್ಕೆ ಎರಡು ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಹೊರೆಯಾಗಲಿದೆ. ಹಿಂದಿನ ಹಂಗಾಮಿನಲ್ಲಿ ಹೋಲಿಸಿದರೆ ರೈತರಿಗೆ 35,000 ಕೋಟಿ ರೂಪಾಯಿಗಳ ಲಾಭವಾಗಲಿದೆ. ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳಿಗೆ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಎಂಎಸ್‌ಪಿ ಶಿಫಾರಸು ಮಾಡಲಾಗಿದೆ.