ಬಕ್ಸರ್ (ಬಿಹಾರ):ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ (IGNOU) MA ಮತ್ತು MBA ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಮುಕ್ತವಾಗಿಯೇ ಸಾಮೂಹಿಕವಾಗಿ ನಕಲು ಮಾಡಿ ಬರೆದಿರುವ ಘಟನೆ ಬಕ್ಸಾರ್‌ನ ಮಹರ್ಷಿ ವಿಶ್ವಾಮಿತ್ರ ಕಾಲೇಜಿನಲ್ಲಿ ನಡೆದಿದೆ. ಪರೀಕ್ಷಾ ಕೇಂದ್ರದಲ್ಲಿ ತಲಾ ಒಬ್ಬ ವಿದ್ಯಾರ್ಥಿಯಿಂದ ಮೂರು ಸಾವಿರ ರೂಪಾಯಿ ಹಣ ಪಡೆದು ಬಹಿರಂಗವಾಗಿ ಕಾಪಿ ಮಾಡಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಎಲ್ಲಾ ವಿದ್ಯಾರ್ಥಿಗಳು ಸಾಮಾಹಿಕವಾಗಿ ನಕಲು ಮಾಡಿ ಪರೀಕ್ಷೆ ಬರೆಯುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಪುಸ್ತಕಗಳನ್ನು ನೋಡಿಕೊಂಡು ಪರೀಕ್ಷೆ ಬರೆದ ವಿದ್ಯಾರ್ಥಿಗಳು:ಮಹರ್ಷಿ ವಿಶ್ವಾಮಿತ್ರ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪುಸ್ತಕ ತೆರೆದು ಬಹಿರಂಗವಾಗಿ ನಕಲು ಮಾಡುತ್ತಿದ್ದರೆ, ಪರಿವೀಕ್ಷಕರು ಪರೀಕ್ಷಾ ಕೊಠಡಿಯೊಳಗೆ ಆರಾಮವಾಗಿ ಅಲ್ಲಿಯೇ ಓಡಾಡುತ್ತಿದ್ದಾರೆ. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ (IGNOU) MA ಮತ್ತು MBA ಕೋರ್ಸ್‌ಗಳ ಪರೀಕ್ಷೆಯಾಗಿದೆ ಎಂದು ಹೇಳಲಾಗುತ್ತಿದೆ.
‘ನಕಲು ಮಾಡಲು ₹2 ಸಾವಿರ, ಪ್ರಾಕ್ಟಿಕಲ್ಗೆ ₹1 ಸಾವಿರ’: ಪರೀಕ್ಷೆ ಮುಗಿಸಿ ಹೊರಬಂದ ಶೀಲಾದೇವಿ ಮಾತನಾಡಿ, ‘ಜಿಲ್ಲೆ ಹಾಗೂ ಕೇಂದ್ರದ ಪ್ರತಿಷ್ಠಿತ ಮಹರ್ಷಿ ವಿಶ್ವಾಮಿತ್ರ ಕಾಲೇಜಿನಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದಿಂದ ಎಂಎ, ಎಂಬಿಎ ಸೇರಿದಂತೆ ಹಲವು ಪರೀಕ್ಷೆಗಳು ನಡೆಯುತ್ತಿವೆ. ಅಧೀಕ್ಷಕರು ವಿದ್ಯಾರ್ಥಿಗಳಿಂದ ಲಿಖಿತ ಪರೀಕ್ಷೆಗೆ ₹2,000 ಪಡೆದು ಬಹಿರಂಗವಾಗಿ ನಕಲು ಮಾಡುವಂತೆ ಸೂಚನೆ ನೀಡಿದ್ದು, ಹಗಲಿರುಳು ತಯಾರಿ ನಡೆಸಿದವರಿಗೆ ಅನ್ಯಾಯವಾಗುತ್ತಿದೆ.
ವಿದ್ಯಾರ್ಥಿಗಳೇ ಮಾಡಿದ ವಿಡಿಯೋ:ಈ ಪರೀಕ್ಷೆಗಳು ಜೂನ್ 7ರಿಂದ ಆರಂಭವಾಗಿದ್ದು, ಜೂನ್ 15ರವರೆಗೆ ನಡೆಯಲಿದೆ. ಸಾಮಾಹಿಕವಾಗಿ ನಕಲು ಮಾಡಿ ಪರೀಕ್ಷೆ ಬರೆಯುತ್ತಿರುವುದನ್ನು ವಿದ್ಯಾರ್ಥಿಗಳು ವಿಡಿಯೋ ಮಾಡಿ ಮಾಧ್ಯಮದವರಿಗೆ ನೀಡಿದ್ದಾರೆ. ನಕಲು ಮಾಡುತ್ತಿರುವ ವಿಡಿಯೋ ಹೊರಬಿದ್ದ ಬಳಿಕ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಉಸ್ತುವಾರಿ ಅಭಿಲಾಷ್ ನಾಯಕ್ ಹೇಳಿದ್ದಾರೆ.