ಕರ್ನಾಟಕ

karnataka

ಬರ್ಗರ್ ಕಿಂಗ್ ರೆಸ್ಟೋರೆಂಟ್​ ಗುಂಡಿನ ದಾಳಿ: ಹರಿಯಾಣ ಪೊಲೀಸ್ ಎನ್‌ಕೌಂಟರ್‌ನಲ್ಲಿ ಇಬ್ಬರು ಶೂಟರ್‌ ಸೇರಿ 3 ಸಾವು - Burger King restaurant firing

ಜೂನ್ 18 ರಂದು ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್​ನಲ್ಲಿರುವ ಪ್ರಸಿದ್ಧ ಬರ್ಗರ್​ ಔಟ್​ಲೆಟ್​ ಬರ್ಗರ್ ಕಿಂಗ್ ರೆಸ್ಟೋರೆಂಟ್​ನಲ್ಲಿ ಭಾರೀ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹರಿಯಾಣ ಪೊಲೀಸರು ಎನ್​​ಕೌಂಟರ್​ ನಡೆಸಿದ್ದಾರೆ.

By PTI

Published : Jul 13, 2024, 7:53 AM IST

Published : Jul 13, 2024, 7:53 AM IST

Image of West Delhi Burger King Murder spot
ದೆಹಲಿಯ ಬರ್ಗರ್ ಕಿಂಗ್ ರೆಸ್ಟೋರೆಂಟ್ (Screen grab taken from ANI video on X)

ನವದೆಹಲಿ: "ಕಳೆದ ತಿಂಗಳು ದೆಹಲಿಯ ಬರ್ಗರ್​ ಕಿಂಗ್​ ರೆಸ್ಟೋರೆಂಟ್​ನಲ್ಲಿ ನಡೆದ ಗುಂಡಿನ ದಾಳಿಯ ಇಬ್ಬರು ಶೂಟರ್​ಗಳು ಸೇರಿದಂತೆ ಮೂವರು ದರೋಡೆಕೋರರನ್ನು, ಹರಿಯಾಣ ಪೊಲೀಸರು ಹಾಗೂ ಕ್ರೈಂ ಬ್ರಾಂಚ್​ ಜಂಟಿ ಕಾರ್ಯಾಚರಣೆ ನಡೆಸಿ, ಸೋನಿಪತ್​ನಲ್ಲಿ ಎನ್​ಕೌಂಟರ್​ ಮಾಡಿದ್ದಾರೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಕಾರ್ಯಾಚರಣೆಯಲ್ಲಿ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಅಮಿತ್ ಗಾಯಗೊಂಡಿದ್ದಾರೆ. ಪೊಲೀಸ್ ಉಪ ಆಯುಕ್ತ (ಡಿಸಿಪಿ) ಅಮಿತ್ ಗೋಯೆಲ್ ಅವರ ಮೇಲ್ವಿಚಾರಣೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತ ಉಮೇಶ್ ಭರತ್ವಾಲ್ ನೇತೃತ್ವದಲ್ಲಿ ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ತಂಡ ಕಾರ್ಯಾಚರಣೆ ನಡೆಸಿದೆ" ಎಂದು ಹೇಳಿದರು.

ಸೋನಿಪತ್ ಪಶ್ಚಿಮದ ಡಿಸಿಪಿ ನರೀಂದರ್ ಸಿಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, "ಹರಿಯಾಣ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಸದಸ್ಯರೂ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಖಾರ್ಖೋಡಾದ ಚಿನೋಲಿ ರಸ್ತೆಯಲ್ಲಿ ಎನ್‌ಕೌಂಟರ್ ನಡೆದಿದೆ" ಎಂದು ಸೋನಿಪತ್‌ನ ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

"ಕಾರ್ಯಾಚರಣೆಯಲ್ಲಿ ಗುಂಡೇಟಿಗೊಳಗಾದ ದರೋಡೆಕೋರರನ್ನು ಆಶಿಶ್ ಅಲಿಯಾಸ್ ಲಾಲು, ಸನ್ನಿ ಖರಾರ್ ಮತ್ತು ವಿಕ್ಕಿ ರಿಧಾನ ಎಂದು ಗುರುತಿಸಲಾಗಿದೆ. ಮೂವರೂ ಹಿಮಾಂಶು ಭಾವು ಗ್ಯಾಂಗ್‌ನ ಸದಸ್ಯರು" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

"ಜೂನ್ 18 ರಂದು ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್​ನಲ್ಲಿರುವ ಪ್ರಸಿದ್ಧ ಬರ್ಗರ್​ ಔಟ್​ಲೆಟ್​ ಬರ್ಗರ್ ಕಿಂಗ್ ರೆಸ್ಟೋರೆಂಟ್​ನಲ್ಲಿ ಭಾರೀ ಗುಂಡಿನ ದಾಳಿ ನಡೆದಿತ್ತು. ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದನು. 26 ವರ್ಷದ ಅಮನ್ ಜೂನ್ ಎಂಬಾತನನ್ನು ಗುಂಡಿಕ್ಕಿ ಕೊಂದವರು ಇದೇ ಆಶಿಶ್ ಮತ್ತು ರಿಧಾನಾ. ಹರಿಯಾಣ ಮೂಲದ ಜೂನ್ ಎಂಬಾತ ಮಹಿಳೆಯೊಂದಿಗೆ ರೆಸ್ಟೋರೆಂಟ್​ನಲ್ಲಿ ಕುಳಿತಿದ್ದಾಗ ಇವರು ದಾಳಿ ನಡೆಸಿದ್ದರು. ಆತನನ್ನು 'ಹನಿ ಟ್ರ್ಯಾಪ್' ಮಾಡಿದ್ದ ಎನ್ನಲಾದ ಮಹಿಳೆ ತಲೆಮರೆಸಿಕೊಂಡಿದ್ದಾಳೆ" ಎಂದು ಅವರು ಮಾಹಿತಿ ನೀಡಿದ್ದಾರೆ.

"ಇಬ್ಬರು ಶೂಟರ್‌ಗಳ ಸಹವರ್ತಿ ಬಿಜೇಂದರ್‌ನನ್ನು ದೆಹಲಿ ಪೊಲೀಸ್ ವಿಶೇಷ ಕೋಶವು ಜೂನ್ 28 ರಂದು ರೋಹಿಣಿಯಲ್ಲಿ ಬಂಧಿಸಿತ್ತು. ಈತ ತನ್ನ ಮೋಟಾರ್‌ಸೈಕಲ್‌ನಲ್ಲಿ ಆಶಿಶ್ ಮತ್ತು ರಿಧಾನಾ ಅವರನ್ನು ಔಟ್‌ಲೆಟ್‌ಗೆ ಕರೆದೊಯ್ದಿದ್ದನು. ಈ ಮೂವರು ಖರ್ಖೋಡಾ ಗ್ರಾಮದಲ್ಲಿ ಅಡಗಿರುವ ಬಗ್ಗೆ ಕ್ರೈಂ ಬ್ರಾಂಚ್ ಮತ್ತು ಹರಿಯಾಣ ಪೊಲೀಸ್ ಎಸ್‌ಟಿಎಫ್‌ಗೆ ಮಾಹಿತಿ ಸಿಕ್ಕಿದೆ. ಜಂಟಿ ತಂಡವು ಸ್ಥಳಕ್ಕೆ ತಲುಪಿದಾಗ, ದರೋಡೆಕೋರರು ಪೊಲೀಸ್ ಸಿಬ್ಬಂದಿಯತ್ತ ಗುಂಡು ಹಾರಿಸಿದ್ದು, ಸಬ್ ಇನ್ಸ್‌ಪೆಕ್ಟರ್ ಗಾಯಗೊಂಡಿದ್ದಾರೆ. ಎಸ್‌ಐ ಅಮಿತ್ ಅವರ ತೊಡೆಗೆ ಗುಂಡಿನ ಗಾಯವಾಗಿದೆ. ಪೊಲೀಸ್ ತಂಡವು ಪ್ರತಿದಾಳಿ ನಡೆಸುತ್ತಿದ್ದಂತೆ, ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಮೂವರು ದರೋಡೆಕೋರರು ತೀವ್ರವಾಗಿ ಗಾಯಗೊಂಡಿದ್ದು, ನಗರದ ಆಸ್ಪತ್ರೆಯ ವೈದ್ಯರು ಸಾವನ್ನಪ್ಪಿರುವುದಾಗಿ ಘೋಷಿಸಿದರು" ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

"ಹಿಮಾಂಶು ಭಾವು ಗ್ಯಾಂಗ್ ಹರ್ಯಾಣ ಮತ್ತು ದೆಹಲಿಯ ಉದ್ಯಮಿಗಳಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಸದ್ಯ ಎನ್‌ಕೌಂಟರ್ ಸ್ಥಳದಿಂದ ಜಂಟಿ ಪಡೆ ಐದು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಅಧಿಕಾರಿ ಹೇಳಿದರು.

"ರಾಜೌರಿ ಗಾರ್ಡನ್‌ನಲ್ಲಿರುವ ಬರ್ಗರ್ ಕಿಂಗ್ ಔಟ್‌ಲೆಟ್‌ನಲ್ಲಿ ನಡೆದ ಹತ್ಯೆಯು ಜೈಲಿನಲ್ಲಿರುವ ದರೋಡೆಕೋರರಾದ ​​ನೀರಜ್ ಬವಾನಾ ಮತ್ತು ಅಶೋಕ್ ಪ್ರಧಾನ್ ನಡುವೆ ನಡೆಯುತ್ತಿರುವ ಗ್ಯಾಂಗ್ ವಾರ್‌ನ ಭಾಗವಾಗಿ ಕಂಡುಬಂದಿದೆ. ಬವಾನಾ ಅವರ ನಿಕಟ ಸಹಾಯಕ, ಪ್ಯುಗಿಟಿವ್ ಸ್ಪೇನ್ ಮೂಲದ ದರೋಡೆಕೋರ ಹಿಮಾಂಶು ಭಾವು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಕೊಲೆಯ ಹೊಣೆ ಹೊತ್ತುಕೊಂಡಿದ್ದು, ಅಕ್ಟೋಬರ್ 2020ರಲ್ಲಿ ಬವಾನಾ ಅವರ ಸೋದರಸಂಬಂಧಿ ಶಕ್ತಿ ಸಿಂಗ್ ಅವರ ಹತ್ಯೆಗೆ ನಮ್ಮ ಗ್ಯಾಂಗ್​ ಪ್ರತೀಕಾರ ತೀರಿಸಿಕೊಂಡಿದೆ ಎಂದು ಹೇಳಿದ್ದಾನೆ. ಶಕ್ತಿ ಸಿಂಗ್ ಇರುವಿಕೆಯ ಮಾಹಿತಿಯನ್ನು ಪ್ರಧಾನ್‌ಗೆ ಜೂನ್ ರವಾನಿಸಿದ್ದ ಎಂದು ನಂಬಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಬರ್ಗರ್ ಕಿಂಗ್ ರೆಸ್ಟೋರೆಂಟ್​ನೊಳಗೆ 10 ಸುತ್ತುಗಳ ಗುಂಡಿನ ದಾಳಿ: ಓರ್ವ ಸಾವು - FIRING AT BURGER KING

ABOUT THE AUTHOR

...view details