ಮಹಾರಾಜಗಂಜ್(ಯುಪಿ): ಉತ್ತರ ಪ್ರದೇಶ ಸರ್ಕಾರದ 'ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ'ಯಡಿ ನಡೆದ ಕಾರ್ಯಕ್ರಮದಲ್ಲಿ ಮತ್ತೆ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಯೋಜನೆಯಡಿ ಬರುವ ಅನುದಾನದ ಆಸೆಗಾಗಿ ಉಲ್ಲಿನ ಮಹಾರಾಜಗಂಜ್ ಜಿಲ್ಲೆಯಲ್ಲಿ ಯುವಕನೊಬ್ಬ ತನ್ನ ವಿವಾಹಿತ ಸಹೋದರಿಯನ್ನೇ ವಿವಾಹವಾಗಿದ್ದಾನೆ! ಮಹಿಳೆಯ ಪತಿಯೇ ಈ ವಿಚಾರವನ್ನು ಬಹಿರಂಗಪಡಿಸಿದ್ದಾನೆ. ಈ ಸಂಗತಿ ಗೊತ್ತಾದ ತಕ್ಷಣ ವಧುವಿಗೆ ಉಡುಗೊರೆಯಾಗಿ ನೀಡಲಾಗಿದ್ದ ವಸ್ತು ಹಾಗೂ ಅನುದಾನವನ್ನು ಮಹಾರಾಜ್‌ಗಂಜ್‌ನ ಪ್ರದೇಶಾಭಿವೃದ್ಧಿ ಅಧಿಕಾರಿ (ಬಿಡಿಒ) ವಾಪಸ್ ಪಡೆದಿದ್ದಾರೆ.
ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆಯ ಲಾಭ ಪಡೆಯುವ ಸಲುವಾಗಿ ಈ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಇಂತಹ ಹಲವು ಪ್ರಕರಣ ನಡೆದಿವೆ. ಕೆಲವು ಸಾರ್ವಜನಿಕರ ವಲಯದಲ್ಲಿ ಸುದ್ದಿಯಾದರೆ, ಇನ್ನು ಕೆಲವು ಆಗಿಲ್ಲ. ಇಂತಹದ್ದೇ ಮತ್ತೊಂದು ಘಟನೆ ಮಾ.5ರಂದು ಮಹಾರಾಜಗಂಜ್ ಜಿಲ್ಲೆಯ ಲಕ್ಷ್ಮೀಪುರ ಬ್ಲಾಕ್‌ನಲ್ಲಿ ನಡೆದಿರುವುದು ಇದೀಗ ಅಚ್ಚರಿ ತರಿಸಿದೆ. ಅಂದು ಈ ವಿವಾಹ ಯೋಜನೆಯಡಿ ಒಟ್ಟು 38 ಬಡ ಜೋಡಿಗಳು ಹಸೆಮಣೆ ಏರಿದ್ದು, ಅದರಲ್ಲಿ ಈ ಪ್ರಕರಣವೂ ಕೂಡಾ ಸೇರಿದೆ.
ಆರ್ಥಿಕವಾಗಿ ದುರ್ಬಲರಾಗಿರುವ ವರ್ಗದವರಿಗೆ ಪ್ರಯೋಜನವಾಗಲಿ ಎಂದು ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಈ ವಿವಾಹ ಯೋಜನೆಯಡಿ, ಮದುವೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ವಿವಾಹವಾಗಿರುವ ದಂಪತಿಗಳು ಗೃಹೋಪಯೋಗಿ ವಸ್ತುಗಳು, 35,000 ರೂ, ವಧುವಿಗೆ ಮಂಗಳಸೂತ್ರ, ಬಟ್ಟೆ - ಬರೆ ಸೇರಿದಂತೆ ಮುಂತಾದ ಉಡುಗೊರೆಗಳನ್ನು ಸರ್ಕಾರವೇ ಸೂಚಿಸಿದ ಅಧಿಕಾರಿಗಳು ನೀಡುತ್ತಾರೆ. ಆದರೆ, ಈ ಸಾಮೂಹಿಕ ವಿವಾಹದಲ್ಲಿ ಹುಡುಗಿಯ ಕಡೆಯವರು ಮಾತ್ರ ಅರ್ಜಿ ಸಲ್ಲಿಸಬೇಕು.
ಈ ಹಣ ಮತ್ತು ಗೃಹೋಪಯೋಗಿ ವಸ್ತುಗಳನ್ನು ಪಡೆಯುವ ದುರಾಸೆಯಿಂದ ಕೆಲವರು ಹೀಗೆ ಮಾಡುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಮಹಾರಾಜ್‌ಗಂಜ್ ಪ್ರಕರಣ ಇದಕ್ಕೆ ಹೊರತಾಗಿಲ್ಲ. ಸಾಮೂಹಿಕ ವಿವಾಹದ ಸಂದರ್ಭದಲ್ಲಿ, ಕೆಲವು ಮಧ್ಯವರ್ತಿಗಳು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ವರ್ಷದ ಹಿಂದೆ ವಿವಾಹವಾದ ಮಹಿಳೆಯನ್ನು ಮತ್ತೊಮ್ಮೆ ವಿವಾಹ ಆಗುವಂತೆ ಆಮಿಷವೊಡ್ಡಿ ಮನವೊಲಿಸಿದ್ದರು. ಆದರೆ, ಮದುವೆಯ ದಿನ ಸಾಮೂಹಿಕ ವಿವಾಹ ನಡೆಯುತ್ತಿದ್ದ ಫಂಕ್ಷನ್ ಹಾಲ್‌ಗೆ ವರವೇ ಬಂದಿರಲಿಲ್ಲ! ಮದುವೆ ಪೂರ್ಣಗೊಳ್ಳದಿದ್ದರೆ ಯೋಜನೆಯ ಹಣ ಪಡೆಯಲು ಸಾಧ್ಯವಿಲ್ಲ ಎಂದು ಅರಿತ ಮಧ್ಯವರ್ತಿಗಳು, ಮಹಿಳೆಯ ಸಹೋದರನನ್ನು ಮನವೊಲಿಸಿ ಸಂಪ್ರದಾಯದಂತೆ ಒಡಹುಟ್ಟಿದವರ ವಿವಾಹ ನಡೆಸಿದ್ದಾರೆ. ಇಂತಹದ್ದೊಂದು ಘಟನೆ ಗೊತ್ತಾಗುತ್ತಿದ್ದಂತೆ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಜನ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಮಹಾರಾಜ್‌ಗಂಜ್‌ನ ಪ್ರದೇಶಾಭಿವೃದ್ಧಿ ಅಧಿಕಾರಿ (ಬಿಡಿಒ) ದಂಪತಿಗೆ ನೀಡಲಾದ ಗೃಹೋಪಯೋಗಿ ವಸ್ತುಗಳು ಮತ್ತು ಹಣವನ್ನು ಹಿಂಪಡೆಯಲು ತಕ್ಷಣ ಕ್ರಮ ಕೈಗೊಂಡಿದ್ದಾರೆ.
ಸಾಮೂಹಿಕ ವಿವಾಹ ಯೋಜನೆ ಅಡಿ ಅನುದಾನ ಹಾಗೂ ಇತರ ಬೆಲೆ ಬಾಳುವ ಉಡುಗೊರೆಗಳನ್ನು ನೋಡಿ ಹೆಚ್ಚಿನ ಜನ ವಿವಾಹ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಮಾರ್ಚ್ 5 ರಂದು ಲಕ್ಷ್ಮಿಪುರ ಬ್ಲಾಕ್‌ನಲ್ಲಿ, ಒಡಹುಟ್ಟಿದ ಸಹೋದರ ಮತ್ತು ಸಹೋದರಿಗೆ ಮದುವೆ ಮಾಡಿಸಿದ್ದಾರೆ. ಆ ಮಹಿಳೆಯ ಮದುವೆ ವರ್ಷದ ಹಿಂದೆಯಷ್ಟೇ ಆಗಿದೆ. ಆಕೆಯ ಪತಿ ತನ್ನ ಜೀವನೋಪಾಯಕ್ಕಾಗಿ ಊರು ತೊರೆದಿದ್ದಾನೆ. ಈ ಮದುವೆ ವಿಚಾರವನ್ನು ಪತಿಗೆ ತಿಳಿಸಲಾಗಿದೆ. ಛಾಯಾಚಿತ್ರಗಳನ್ನೂ ಕಳುಹಿಸಿದ್ದಾರೆ. ಇದನ್ನು ಕಂಡು ಪತಿ ಆತಂಕಗೊಂಡಿದ್ದಾನೆ. ತನಿಖೆಯಿಂದ ಇಂತಹದ್ದೊಂದು ಘಟನೆ ನಡೆದಿರುವುದು ಗೊತ್ತಾಗಿದೆ. ನೀಡಿದ ಅನುದಾನದ ಮೊತ್ತವನ್ನು ಸಹ ನಿಷೇಧಿಸಲಾಗಿದೆ. ಈ ಬಗ್ಗೆಯೂ ಸಹ ತನಿಖೆ ಸಹ ನಡೆಸಲಾಗುತ್ತಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಂ ಅನುನಯ್ ಝಾ ತಿಳಿಸಿದ್ದಾರೆ.
ಇನ್ನು ಬಿಡಿಒ ಲಕ್ಷ್ಮೀಪುರ ಅಮಿತ್ ಮಿಶ್ರಾ ಅವರು ಕಾರ್ಯದರ್ಶಿ ಕೌಶಲೇಂದ್ರ ಕುಶ್ವಾಹ ಅವರನ್ನು ಯುವತಿಯ ಮನೆಗೆ ಕಳುಹಿಸಿ ಸಾಮೂಹಿಕ ವಿವಾಹದ ಸಂದರ್ಭದಲ್ಲಿ ನೀಡಲಾಗಿದ್ದ ಎಲ್ಲ ವಸ್ತುಗಳನ್ನು ವಾಪಸ್ ಪಡೆದಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಇದನ್ನೂ ಓದಿ: ಸರ್ಕಾರದ ಹಣ ಪಡೆಯಲು ನಕಲಿ ವಧು, ವರರಾದ ಜನ: ಯುಪಿಯಲ್ಲಿ ಭಾರಿ ಅವ್ಯವಹಾರ ಬಯಲು