ಕರ್ನಾಟಕ

karnataka

ETV Bharat / bharat

ಲಡ್ಡು ಪ್ರಸಾದ ವಿವಾದದ ಒಂದು ತಿಂಗಳ ನಂತರ ತಿರುಪತಿ ದೇವಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕ

ತಿರುಪತಿ ದೇವಸ್ಥಾನ ಮಂಡಳಿಯ 54ನೇ ಅಧ್ಯಕ್ಷರಾಗಿ ಬಿ.ಆರ್.ನಾಯ್ಡು ಅಧಿಕಾರ ಸ್ವೀಕರಿಸಿದ್ದಾರೆ.

ತಿರುಪತಿ ದೇವಸ್ಥಾನ ಮಂಡಳಿಯ 54ನೇ ಅಧ್ಯಕ್ಷರಾಗಿ ಬಿಆರ್ ನಾಯ್ಡು ಅಧಿಕಾರ ಸ್ವೀಕಾರ
ತಿರುಪತಿ ದೇವಸ್ಥಾನ ಮಂಡಳಿಯ 54ನೇ ಅಧ್ಯಕ್ಷರಾಗಿ ಬಿಆರ್ ನಾಯ್ಡು ಅಧಿಕಾರ ಸ್ವೀಕಾರ (ANI)

By ANI

Published : 4 hours ago

ತಿರುಪತಿ(ಆಂಧ್ರ ಪ್ರದೇಶ): ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟಿಗಳ ಮಂಡಳಿಯ 54ನೇ ಅಧ್ಯಕ್ಷರಾಗಿ ಬಿ.ಆರ್.ನಾಯ್ಡು ಅವರು ಬುಧವಾರ ಬೆಳಿಗ್ಗೆ ತಿರುಮಲ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಅವರು ಹೊಸ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿದರು.

ಬಿ.ಆರ್.ನಾಯ್ಡು ಮೊದಲಿಗೆ ವರಾಹ ಸ್ವಾಮಿಯ ದರ್ಶನ ಪಡೆದು, ವೈಕುಂಠಂ ಕ್ಯೂ ಕಾಂಪ್ಲೆಕ್ಸ್ 1ರ ಮೂಲಕ ದೇವಾಲಯದೊಳಗೆ ಪ್ರವೇಶಿಸಿದರು. ವೆಂಕಟೇಶ್ವರನ ದರ್ಶನದ ನಂತರ, ಪುರೋಹಿತರು ರಂಗನಾಯಕುಲ ಮಂಟಪದಲ್ಲಿ ವೈದಿಕ ಮಂತ್ರಗಳೊಂದಿಗೆ ಆಶೀರ್ವಾದ ನೀಡಿದರು.

ತಿರುಪತಿ ಲಡ್ಡು ಪ್ರಸಾದದ ಬಗ್ಗೆ ವಿವಾದ ಕಾಣಿಸಿಕೊಂಡ ಒಂದು ತಿಂಗಳ ನಂತರ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕವಾಗಿರುವುದು ವಿಶೇಷ.

ಲಡ್ಡು ಪ್ರಸಾದ ವಿವಾದ: ಹಿಂದಿನ ವೈಎಸ್ಆರ್​ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನೀಡಲಾಗುವ ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಸೇರಿದಂತೆ ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದ ನಂತರ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಅಕ್ಟೋಬರ್ 4ರಂದು ಸ್ವತಂತ್ರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿತು.

ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ನ್ಯಾಯಪೀಠವು ತಿರುಮಲ ಪ್ರಸಾದದಲ್ಲಿ ವಿಶ್ವದಾದ್ಯಂತದ ಕೋಟ್ಯಂತರ ಭಕ್ತರ ಭಾವನೆಗಳು ಅಡಕವಾಗಿವೆ ಎಂದು ಹೇಳಿದೆ. "ಈ ವಿಷಯ ರಾಜಕೀಯ ಪ್ರಹಸನವಾಗಲು ನಾವು ಬಯಸುವುದಿಲ್ಲ. ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆದರೆ ಆ ತನಿಖೆಯ ಬಗ್ಗೆ ಹೆಚ್ಚಿನ ವಿಶ್ವಾಸವಿರುತ್ತದೆ ಎಂದು ನ್ಯಾಯಪೀಠವು ಅರ್ಜಿಗಳನ್ನು ವಿಲೇವಾರಿ ಮಾಡುವಾಗ ಹೇಳಿದೆ.

ಸಿಬಿಐ ನಿರ್ದೇಶಕರು ನಾಮನಿರ್ದೇಶನ ಮಾಡುವ ಕೇಂದ್ರ ತನಿಖಾ ದಳದ (ಸಿಬಿಐ) ಇಬ್ಬರು ಅಧಿಕಾರಿಗಳು, ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡುವ ಆಂಧ್ರಪ್ರದೇಶ ರಾಜ್ಯ ಪೊಲೀಸ್​ ಇಲಾಖೆಯ ಇಬ್ಬರು ಅಧಿಕಾರಿಗಳು ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ಹಿರಿಯ ಅಧಿಕಾರಿಯನ್ನು ಎಸ್ಐಟಿ ಒಳಗೊಂಡಿರುತ್ತದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಎಸ್ಐಟಿಯನ್ನು ಸಿಬಿಐ ನಿರ್ದೇಶಕರು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಹೊಸ ಎಸ್ಐಟಿ ರಾಜ್ಯ ಸರ್ಕಾರ ಸ್ಥಾಪಿಸಿದ ಎಸ್ಐಟಿಯ ಸ್ಥಾನದಲ್ಲಿ ಕೆಲಸ ಮಾಡಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದನ್ನೂ ಓದಿ : ಎಲ್​ಎಂವಿ ಲೈಸೆನ್ಸ್​ ಹೊಂದಿರುವವರು ಸಾರಿಗೆ ವಾಹನ ಓಡಿಸಬಹುದು: ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು

ABOUT THE AUTHOR

...view details