ನವದೆಹಲಿ:ನಾನು ಬಿಜೆಪಿ ಸೇರಬೇಕು ಎಂದು ಅಲ್ಲಿನ ನಾಯಕರು ಬಯಸುತ್ತಿದ್ದಾರೆ. ಆದರೆ, ನಾನು ಅವರ ಒತ್ತಡಕ್ಕೆ ಎಂದಿಗೂ ಮಣಿಯುವುದಿಲ್ಲ. ನನ್ನ ಮೇಲೆ ಎಷ್ಟೇ ಆರೋಪ ಮಾಡಿದರೂ ಬಿಜೆಪಿಗೆ ತಲೆಬಾಗುವುದಿಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗುಡುಗಿದ್ದಾರೆ.
ಆಮ್ ಆದ್ಮಿ ಪಕ್ಷದ ಶಾಸಕರನ್ನು ಬಿಜೆಪಿ ಸೆಳೆಯುತ್ತಿದೆ. ಕೋಟ್ಯಂತರ ರೂಪಾಯಿ ಹಣದ ಆಮಿಷವೊಡ್ಡಿದೆ ಎಂದು ಆರೋಪಿಸಿದ್ದ ದೆಹಲಿ ಸಿಎಂ, ಈಗ ತಮಗೂ ಕೂಡ ಬಿಜೆಪಿ ಸೇರುವಂತೆ ಒತ್ತಡ ಹೇರಲಾಗುತ್ತಿದೆ ಎಂದು ದೂರಿದ್ದಾರೆ. ಇದನ್ನೆಲ್ಲಾ ಎದುರಿಸುವೆ. ನನ್ನನ್ನು ಬಂಧಿಸಿ ಜೈಲಿಗೆ ಹಾಕಿದರೂ, ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿವೆ ಎಂದು ಅವರು ಹೇಳಿದರು.
ಇಲ್ಲಿನ ಶಾಲಾ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಪ್ ಸರ್ಕಾರದಿಂದ ದೆಹಲಿಯಲ್ಲಿ ನಡೆಯುತ್ತಿರುವ ಶಾಲೆಗಳ ನಿರ್ಮಾಣ ಮತ್ತು ಜನರಿಗೆ ಉಚಿತ ಯೋಜನೆಗಳಂತಹ ಯಾವುದೇ ಕಾರ್ಯಕ್ರಮಗಳು ನಾನು ಜೈಲಿಗೆ ಹೋದರೂ ನಿಲ್ಲುವುದಿಲ್ಲ. ಮಾಜಿ ಸಚಿವರಾದ ಮನೀಶ್ ಸಿಸೋಡಿಯಾ ಶಾಲೆಗಳನ್ನು ನಿರ್ಮಿಸಿದ ಕಾರಣಕ್ಕಾಗಿ ಜೈಲುಪಾಲಾದರು. ಸತ್ಯೇಂದ್ರ ಜೈನ್ ಮೊಹಲ್ಲಾ ಕ್ಲಿನಿಕ್‌ಗಳನ್ನು ನಿರ್ಮಿಸಿದ್ದರಿಂದ ಶಿಕ್ಷೆಗೆ ಗುರಿಯಾದರು. ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಗಳನ್ನು ನಮ್ಮ ಮೇಲೆ ಕೇಂದ್ರ ಸರ್ಕಾರ ಗುರಾಣಿಯನ್ನಾಗಿ ಬಳಸುತ್ತಿದೆ ಎಂದು ಆರೋಪಿಸಿದರು.