ನವದೆಹಲಿ:2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಶೇಕಡಾ 36.6 ಮತಗಳನ್ನು ಪಡೆದುಕೊಂಡಿದೆ. 2019 ರಲ್ಲಿ ದಾಖಲಾದ ಶೇಕಡಾ 37.3 ಕ್ಕೆ ಹೋಲಿಸಿದರೆ, ಇದು ಕೇವಲ ಶೇ 0.7ರಷ್ಟು ಮಾತ್ರವೇ ಕಡಿಮೆಯಾಗಿದೆ. ಆದರೆ, ಸೀಟುಗಳ ವಿಷಯದಲ್ಲಿ ಭಾರಿ ಅಂತರವಿದೆ. ಅದೇ ಸಮಯದಲ್ಲಿ, ಭಾರತೀಯ ಜನತಾ ಪಕ್ಷವು 303 ರಿಂದ 240 ಸ್ಥಾನಗಳಿಗೆ ಕುಸಿದಿದೆ. ಒಟ್ಟು 63 ಸ್ಥಾನಗಳನ್ನ ಭಾರತೀಯ ಜನತಾ ಪಕ್ಷ ಕಳೆದುಕೊಂಡಿದೆ. ಮತ್ತೊಂದೆಡೆ, ಕಾಂಗ್ರೆಸ್‌ನ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಕಳೆದ ಚುನಾವಣೆಯಲ್ಲಿ ಶೇ.19.5ರಷ್ಟು ಮತಗಳನ್ನು ಪಡೆದಿದ್ದ ಪಕ್ಷ ಈ ಬಾರಿ ಶೇ.21.2ರಷ್ಟು ಮತಗಳನ್ನಷ್ಟೇ ಪಡೆದುಕೊಂಡಿದೆ. ಅಂದರೆ ಶೇ.1.7ರಷ್ಟು ಮತಗಳು ಹೆಚ್ಚಿವೆ. ಆದರೆ ಸೀಟುಗಳ ಸಂಖ್ಯೆ 52 ರಿಂದ 99 ಕ್ಕೆ ಜಿಗಿತ ಕಂಡಿವೆ.
ಶೇಕಡಾವಾರು ಮತಗಳು ಹೆಚ್ಚಿದ್ದರೂ ಒಂದೇ ಒಂದು ಸ್ಥಾನವೂ ಸಿಗಲಿಲ್ಲ:ಚುನಾವಣೆಯಲ್ಲಿ ಮತಗಳ ಶೇಕಡಾವಾರು ವ್ಯತ್ಯಾಸಗಳು ಚಿಕ್ಕದಾದರೂ ಸ್ಥಾನಗಳ ವಿಷಯದಲ್ಲಿ ದೊಡ್ಡ ವ್ಯತ್ಯಾಸಗಳಿಗೆ ಕಾರಣವಾಗುತ್ತವೆ. ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲೂ ಆಗಿದ್ದೂ ಇದೆ. 2019ಕ್ಕೆ ಹೋಲಿಸಿದರೆ ತಮಿಳುನಾಡಿನಲ್ಲಿ ಬಿಜೆಪಿಯ ಮತಗಳ ಪ್ರಮಾಣ ಶೇ.3.2ರಿಂದ ಶೇ.11.2ಕ್ಕೆ ಏರಿಕೆಯಾಗಿದೆ. ಆದರೆ, ಹೆಚ್ಚಿದ ಮತಗಳಿಂದ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಪಂಜಾಬ್‌ನಲ್ಲಿ ಶೇಕಡಾವಾರು ಮತಗಳು ಶೇಕಡಾ 9.6 ರಿಂದ ಶೇಕಡಾ 18.6 ಕ್ಕೆ ಏರಿಕೆ ಆಗಿದೆ. ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದ ಕಾರಣ ಭಾರತೀಯ ಜನತಾ ಪಕ್ಷ ಎರಡೂ ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು. ಬಿಹಾರದಲ್ಲಿ ಶೇ.23.6 ರಿಂದ ಶೇ.20.5ಕ್ಕೆ ಕುಸಿದಿರುವುದು ಬಿಜೆಪಿ ಐದು ಸ್ಥಾನಗಳನ್ನು ಕಳೆದುಕೊಂಡಿದೆ. ಬಂಗಾಳದಲ್ಲಿ ಬಿಜೆಪಿ ಶೇ.1.6ರಷ್ಟು ಮತಗಳನ್ನು ಕಳೆದುಕೊಂಡಿದ್ದರಿಂದ ಆರು ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು. 2019 ರಲ್ಲಿ ಬಂಗಾಳದಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದಿತ್ತು, ಆದರೆ ಈ ಬಾರಿ ಅದು 12 ಕ್ಕೆ ಸೀಮಿತವಾಗಿದೆ. ಮಹಾರಾಷ್ಟ್ರದಲ್ಲಿ ಮತಗಳಿಕೆ ಶೇ.1.4ರಷ್ಟಿದ್ದರೂ ಸೀಟುಗಳ ಸಂಖ್ಯೆ 23 ರಿಂದ 9ಕ್ಕೆ ಕುಸಿದಿದೆ.