ಪಾಕುರ್ (ಜಾರ್ಖಂಡ್): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಶುಕ್ರವಾರ ಜಾರ್ಖಂಡ್ ಪ್ರವೇಶಿಸಿದೆ. ಜಾರ್ಖಂಡ್ಗೆ ಯಾತ್ರೆ ಪ್ರವೇಶ ಮಾಡುತ್ತಿದ್ದಂತೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದರು. ಜಾರ್ಖಂಡ್ ಸರ್ಕಾರವನ್ನು ಬೀಳಿಸಲು ಭಾರತೀಯ ಜನತಾ ಪಕ್ಷ ಪ್ರಯತ್ನಿಸಿದೆ ಎಂದು ಆರೋಪಿಸಿದರು. ಇದೊಂದು ಪಿತೂರಿ ಎಂದೂ ಗಂಭೀರ ಆರೋಪ ಮಾಡಿದರು.
"ಜಾರ್ಖಂಡ್‌ನಲ್ಲಿ, ಜನರಿಂದ ಆಯ್ಕೆಯಾದ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನ ಮಾಡಿದೆ. ಆದರೆ ಈ ಯತ್ನ ಸಫಲವಾಗಿಲ್ಲ. ನೀವೆಲ್ಲ ಸೇರಿಕೊಂಡು ಬಿಜೆಪಿಯ ಈ ಪಿತೂರಿಯನ್ನು ಧೈರ್ಯದಿಂದ ಎದುರಿಸಿದ್ದೀರಿ. ನಿಮ್ಮ ಸಹಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನಾವು ಬಿಜೆಪಿಗೆ ಹೆದರುವುದಿಲ್ಲ ಎಂದು ರಾಹುಲ್ ಗಾಂಧಿ ಇದೇ ವೇಳೆ ಗುಡುಗಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಭಾರತದಲ್ಲಿ ಕೋಟ್ಯಂತರ ಜನರಿಗೆ 'ಅನ್ಯಾಯ'ವಾಗುತ್ತಿದೆ. ಇಂದಿನ ಭಾರತದಲ್ಲಿ, ಯುವಕರು ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನರೇಂದ್ರ ಮೋದಿ ಜಿ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯನ್ನು ಜಾರಿಗೆ ತರುವ ಮೂಲಕ ಸಣ್ಣ ಉದ್ಯಮಿಗಳನ್ನು ನಾಶಪಡಿಸಿದ್ದಾರೆ. ಅದಕ್ಕಾಗಿಯೇ ನಾವು ಆರ್ಥಿಕ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ನಿಮ್ಮೊಂದಿಗೆ ಮಾತನಾಡಲು ಈ ಯಾತ್ರೆಯನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.