ನವದೆಹಲಿ:ಇಡೀ ದೇಶದ ಎಲ್ಲ ರಾಜಕೀಯ ಪಕ್ಷಗಳು ಮತ್ತು ಜನರು ನಿರೀಕ್ಷಿಸುತ್ತಿರುವ ಬಿಜೆಪಿ ಚುನಾವಣಾ ಪ್ರಣಾಳಿಕೆ (ಸಂಕಲ್ಪ ಪತ್ರ)ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಡುಗಡೆ ಮಾಡಿದರು. ಕೇಂದ್ರ ರಕ್ಷಣಾ ಸಚಿವ, ಪ್ರಣಾಳಿಕೆ ಸಮಿತಿಯ ಮುಖ್ಯಸ್ಥ ರಾಜನಾಥ್ ಸಿಂಗ್, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾರ್ಯಕ್ರಮದಲ್ಲಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, "ದೇಶದ ವಿವಿಧೆಡೆ ಇಂದು ಹೊಸ ವರ್ಷಾಚರಣೆ ನಡೆಯುತ್ತಿದೆ. ಇಂಥ ಶುಭದಿನದಂದು ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಉತ್ತಮ ಪ್ರಣಾಳಿಕೆಯನ್ನು ರೂಪಿಸಿದ್ದಕ್ಕೆ ರಾಜನಾಥ್ ಸಿಂಗ್ ಮತ್ತವರ ತಂಡಕ್ಕೆ ಅಭಿನಂದನೆ ಸಲ್ಲಿಸುವೆ" ಎಂದರು.
ಇಂದು ವಿಕಸಿತ ಭಾರತದ ಸಂಕಲ್ಪ ಪತ್ರ ಬಿಡುಗಡೆಯಾಗಿದೆ. ಇದರಲ್ಲಿ ಯುವಶಕ್ತಿ, ರೈತರು, ಮಹಿಳೆಯರು, ಬಡವರನ್ನು ಒಳಗೊಂಡಿದೆ. 25 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತಂದ ಸಾಧನೆ ನಮ್ಮ ಸರ್ಕಾರದ್ದಾಗಿದೆ. ಸರ್ಕಾರ ರೂಪಿಸುವ ಯೋಜನೆಗಳು ಜನರ ಮನಸ್ಸು ಮತ್ತು ಜೇಬನ್ನು ತುಂಬಬೇಕು ಎಂದು ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ 3 ಕೋಟಿ ಮನೆ ನಿರ್ಮಾಣ ಗುರಿ, ಮನೆ ಮನೆಗೂ ಗ್ಯಾಸ್ ಪೂರೈಕೆ, ವಿದ್ಯುತ್ ಬೆಲೆ ಕಡಿತಕ್ಕೆ ಪಿಎಂ ಸೂರ್ಯ ಘರ್ ಯೋಜನೆ ರೂಪಿಸಲಾಗಿದೆ. ಈಗಾಗಲೇ 1 ಕೋಟಿ ಜನರು ಇದರಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದರು.
ಪ್ರಣಾಳಿಕೆಯ ಪ್ರಮುಖಾಂಶಗಳು:
- ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ
- ಒಂದು ದೇಶ ಒಂದು ಚುನಾವಣೆ ಗುರಿ
- ಮುಂದಿನ 5 ವರ್ಷ ಬಡವರಿಗೆ ಉಚಿತ ಅಕ್ಕಿ ವಿತರಣೆ
- ವಿಶ್ವದಲ್ಲಿ ಭಾರತ ಮೂರನೇ ಆರ್ಥಿಕ ರಾಷ್ಟ್ರ ಗುರಿ
- ತೃತೀಯ ಲಿಂಗಿಗಳಿಗೆ ಆಯುಷ್ಮಾನ್ ಯೋಜನೆ ವಿಸ್ತರಣೆ
- ಪಿಎಂ ಆವಾಸ್ ಯೋಜನೆಯಡಿ 3 ಲಕ್ಷ ಮನೆ ನಿರ್ಮಾಣ
- 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆ
- ಸೂರ್ಯ ಘರ್ ಯೋಜನೆಯಡಿ ಉಚಿತ ವಿದ್ಯುತ್
- ನಾಲ್ಕು ದಿಕ್ಕುಗಳಿಗೆ ಬುಲೆಟ್ ಟ್ರೇನ್ ಸಂಪರ್ಕ
- ಮೂರು ಕೋಟಿ ಮಹಿಳೆಯರಿಗೆ ಲಕ್ಪತಿ ದೀದಿ ಗ್ಯಾರಂಟಿ, ಬಡವರಿಗೆ ಮನೆ ನಿರ್ಮಾಣ
- ಮುದ್ರಾ ಯೋಜನೆಯಡಿ ಸಾಲದ ಮೊತ್ತ 10 ಲಕ್ಷದಿಂದ 20ಲಕ್ಷಕ್ಕೆ ಏರಿಕೆ
ಪ್ರಣಾಳಿಕೆ ಸಮಿತಿ ರಚನೆ:ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು 2024ರ ಲೋಕಸಭೆ ಚುನಾವಣೆಗೆ ಚುನಾವಣಾ ಪ್ರಣಾಳಿಕೆ ಸಮಿತಿಯನ್ನು ನೇಮಕ ಮಾಡಿದ್ದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮಿತಿಯ ನೇತೃತ್ವ ವಹಿಸಿದ್ದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿತ್ತು. ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸಹ ಸಂಚಾಲಕರಾಗಿದ್ದಾರೆ.
ಸಮಿತಿಯು ಸದಸ್ಯರಾಗಿ ಭೂಪೇಂದರ್ ಯಾದವ್, ಅರ್ಜುನ್ ರಾಮ್ ಮೇಘವಾಲ್, ಕಿರಣ್ ರಿಜಿಜು, ಅಶ್ವಿನಿ ವೈಷ್ಣವ್, ಧರ್ಮೇಂದ್ರ ಪ್ರಧಾನ್, ಭೂಪೇಂದರ್ ಪಟೇಲ್, ಹಿಮಂತ ಬಿಸ್ವಾ ಶರ್ಮಾ, ವಿಷ್ಣು ದೇವ್ ಸಾಯಿ, ಮೋಹನ್ ಯಾದವ್, ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೆ, ಸ್ಮೃತಿ ಇರಾನಿ, ಜುಯಲ್ ಇರಾನಿ ಅವರನ್ನು ಒಳಗೊಂಡಿತ್ತು. ರವಿಶಂಕರ್ ಪ್ರಸಾದ್, ಸುಶೀಲ್ ಮೋದಿ, ಕೇಶವ್ ಪ್ರಸಾದ್ ಮೌರ್ಯ, ರಾಜೀವ್ ಚಂದ್ರಶೇಖರ್, ವಿನೋದ್ ತಾವ್ಡೆ, ರಾಧಾ ಮೋಹನ್ ದಾಸ್ ಅಗರ್ವಾಲ್, ಮಂಜಿಂದರ್ ಸಿಂಗ್ ಸಿರ್ಸಾ, ಓ.ಪಿ. ಧಂಕರ್, ಅನಿಲ್ ಆಂಟೋನಿ ಮತ್ತು ತಾರಿಕ್ ಮನ್ಸೂರ್ ಅವರು ಇದ್ದಾರೆ.
ಇದನ್ನೂ ಓದಿ:ಲೋಕಸಭೆ ಚುನಾವಣೆ 2024: ನಾಳೆ ಬಿಜೆಪಿ ಚುನಾವಣಾ ಪ್ರಣಾಳಿಕೆ ರಿಲೀಸ್ ಸಾಧ್ಯತೆ - BJP to release manifesto