ನವದೆಹಲಿ:ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆ ದೇಶದಲ್ಲಿ 7 ದಿನ ಶೋಕಾಚರಣೆ ಘೋಷಿಸಲಾಗಿದೆ. ದೇಶವೇ ದುಃಖತಪ್ತವಾಗಿರುವಾಗ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಹೊಸ ವರ್ಷದ ಸಂಭ್ರಮದಲ್ಲಿ ಭಾಗಿಯಾಗಲು ವಿಯೆಟ್ನಾಮ್ಗೆ ತೆರಳಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಸಂವೇದನಾಶೀಲತೆ ಇಲ್ಲದ ವ್ಯಕ್ತಿಗಳು, ಮಾಜಿ ಪ್ರಧಾನಿ ಸಾವಿನಲ್ಲೂ ರಾಜಕೀಯ ಮಾಡಿದರು. ಈಗ, ಹೊಸ ವರ್ಷದ ಸಂಭ್ರಮಕ್ಕಾಗಿ ವಿದೇಶಕ್ಕೆ ತೆರಳುವ ಮೂಲಕ ಸಿಖ್ ಸಮುದಾಯದ ಮೊದಲ ಪ್ರಧಾನಿಗೆ ಅಗೌರವ ತೋರಿದ್ದಾರೆ. ಇದು ಡಾ. ಸಿಂಗ್ ಅವರ ಮೇಲಿದ್ದ ತಿರಸ್ಕಾರವನ್ನೂ ತೋರಿಸುತ್ತದೆ ಎಂದು ಬಿಜೆಪಿ ಟೀಕಿಸಿದೆ.
ಈ ಕುರಿತು ಬಿಜೆಪಿ ನಾಯಕ ಅಮಿತ್ ಮಾಳವೀಯಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ಮನಮೋಹನ್ ಸಿಂಗ್ ಅವರ ಸಾವನ್ನು ರಾಹುಲ್ ಗಾಂಧಿ ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡರು. ಶೋಕದ ಸಂದರ್ಭದಲ್ಲೂ ವಿದೇಶದಲ್ಲಿ ಮಸ್ತಿ ಮಾಡಲು ತೆರಳಿದ್ದು, ಸಿಂಗ್ ಬಗ್ಗೆ ಇದ್ದ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಆರೋಪಿಸಿದ್ದಾರೆ.
ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಎಂದಿಗೂ ಸಿಖ್ಖರನ್ನು ದ್ವೇಷಿಸುತ್ತವೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದರ್ಬಾರ್ ಸಾಹಿಬ್ ಅನ್ನು ಅಪವಿತ್ರಗೊಳಿಸಿದ್ದನ್ನು ಎಂದಿಗೂ ಮರೆಯಬಾರದು ಎಂದು ಮಾಳವಿಯಾ ಅವರು ಬರೆದುಕೊಂಡಿದ್ದಾರೆ.
ಅಸ್ಥಿ ವಿಸರ್ಜನೆಯಲ್ಲೂ ಕಾಂಗ್ರೆಸ್ ಗೈರು:ಮನಮೋಹನ್ ಸಿಂಗ್ ಅವರ ಅಸ್ಥಿಯನ್ನು ಇಂದು ಯಮುನಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಕಾಂಗ್ರೆಸ್ನ ಯಾವೊಬ್ಬ ನಾಯಕರೂ ಭಾಗಿಯಾಗದ್ದಕ್ಕೆ ಬಿಜೆಪಿ ಕಿಡಿಕಾರಿದೆ. ಹಿಂದೆ ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ಅವರಿಗೂ ಕಾಂಗ್ರೆಸ್ ಇಂಥದ್ದೇ ಅವಮಾನ ಮಾಡಿತ್ತು. ಇದೀಗ, ಡಾ. ಸಿಂಗ್ ಅವರ ಚಿತಾಭಸ್ಮ ವಿಸರ್ಜನೆಯಲ್ಲೂ ಆ ಪಕ್ಷ ಭಾಗವಹಿಸಿಲ್ಲ. ಇದು ಕಾಂಗ್ರೆಸ್ ನಿಜ ರೂಪ ಎಂದು ಟೀಕಿಸಿದೆ.
ಹಿರಿಯ ನಾಯಕ ಸುಧಾಂಶು ತ್ರಿವೇದಿ ಅವರು, ಸಿಂಗ್‌ರನ್ನು ಕಾಂಗ್ರೆಸ್ ಮೊದಲಿನಿಂದಲೂ ಅಗೌರವದಿಂದ ನಡೆಸಿಕೊಂಡಿದೆ. ಅವರ ಸಾವಿನ ಬಳಿಕವೂ ತಿರಸ್ಕಾರ ಮುಂದುವರಿಸಿದೆ. ಅಸ್ಥಿ ವಿಸರ್ಜನೆಯಲ್ಲಿ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳದೇ ಮಾಜಿ ಪ್ರಧಾನಿಯನ್ನು ಅವಮಾನಿಸಿದ್ದಾರೆ ಎಂದು ದೂರಿದ್ದಾರೆ.
ಅಸ್ಥಿ ವಿಸರ್ಜನೆ ವೈಯಕ್ತಿಕ:ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಮನಮೋಹನ್ ಸಿಂಗ್ ಅವರ ಅಸ್ಥಿ ವಿಸರ್ಜನೆಯು ಕುಟುಂಬದ ವೈಯಕ್ತಿಕ ಮತ್ತು ಭಾವನಾತ್ಮಕ ಕ್ರಿಯೆಯಾಗಿದೆ. ಹೀಗಾಗಿ, ಪಕ್ಷವು ಪಾಲ್ಗೊಂಡಿಲ್ಲ. ಕುಟುಂಬದ ಖಾಸಗಿತನವನ್ನು ಗೌರವಿಸಲಾಗಿದೆ. ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ಡಾ.ಸಿಂಗ್ ಕುಟುಂಬವನ್ನು ಭೇಟಿ ಮಾಡಿದ್ದರು ಎಂದು ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ: ಡಾ.ಸಿಂಗ್ ಅಂತ್ಯಕ್ರಿಯೆ ವೇಳೆ ಪಂಚತಾರಾ ಹೋಟೆಲ್ ಉದ್ಘಾಟಿಸಿದ ಕೇರಳ ಸಿಎಂ, ಕಾಂಗ್ರೆಸ್ ಕಿಡಿ