ನವದೆಹಲಿ:ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಇಂಡಿಯಾ ಕೂಟದ ಪ್ರಮುಖ ಪಕ್ಷಗಳಾದ ಆಮ್ ಆದ್ಮಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ಘೋಷಿಸಿದ್ದು, 'ಮೈತ್ರಿಕೂಟದ ಮರಣಶಾಸನ' ಎಂದು ಬಿಜೆಪಿ ಹೇಳಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ತಮ್ಮ ಪಕ್ಷವನ್ನು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ. ಇತ್ತ ಪಂಜಾಬ್ನಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಅಲ್ಲಿನ ಸಿಎಂ ಭಗವಂತ್ ಮಾನ್ ತಿಳಿಸಿದ್ದಾರೆ. ಇದು ಇಂಡಿಯಾ ಕೂಟವು ಛಿದ್ರವಾಗುವ ಲಕ್ಷಣ ಎಂದು ಬಿಜೆಪಿ ಭವಿಷ್ಯ ನುಡಿದಿದೆ.
ಕಾಗದದ ಮೇಲಿನ ಮೈತ್ರಿಕೂಟ:ಈ ಬಗ್ಗೆ ಎಕ್ಸ್ ಪೋಸ್ಟ್ನಲ್ಲಿ ಟೀಕಿಸಿರುವ ಪಶ್ಚಿಮ ಬಂಗಾಳದ ಬಿಜೆಪಿ ಸಹ - ಪ್ರಭಾರಿ ಮತ್ತು ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು, ಮಮತಾ ಬ್ಯಾನರ್ಜಿ ಅವರ ನಿರ್ಧಾರವು ಹತಾಶೆಯ ಸಂಕೇತ. ಮೈತ್ರಿಯಲ್ಲಿ ಯಾವುದೇ ಸ್ಥಾನ ಸಿಗದ ಕಾರಣ ಅವರು ಈ ನಿರ್ಣಯಕ್ಕೆ ಬಂದಿದ್ದಾರೆ. ಮುಜುಗರಕ್ಕೊಳಗಾದ ಮಮತಾ ಅವರು ಮಲ್ಲಿಕಾರ್ಜುನ ಖರ್ಗೆಯ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಲು ಸೂಚಿಸಿದ್ದರು ಎಂದಿದ್ದಾರೆ. ಇಷ್ಟೆಲ್ಲಾ ಮಾಡಿದರೂ, ಕೂಟದಲ್ಲಿ ತಮಗೆ ಸೂಕ್ತ ಪ್ರಾಧಾನ್ಯತೆ ದೊರೆಯದ ಕಾರಣ ಮಮತಾ ಅವರು, ರಾಹುಲ್ ಗಾಂಧಿ ನಡೆಸುತ್ತಿರುವ ಸರ್ಕಸ್ (ಯಾತ್ರೆ) ಬಂಗಾಳಕ್ಕೆ ಬರುವ ಮುನ್ನವೇ ಏಕಾಂಗಿ ಹೋರಾಟದ ದೃಢ ನಿರ್ಧಾರ ಘೋಷಿಸಿದ್ದಾರೆ. ಇದು I.N.D.I.A ಕೂಟದ ಮರಣಶಾಸನವಾಗಿದೆ ಅಮಿತ್ ಹೇಳಿದ್ದಾರೆ.