ನವದೆಹಲಿ:'ಪ್ರಜಾಪ್ರಭುತ್ವದ ದೇಗುಲ' ಸಂಸತ್ ಭವನದ ಮುಂದೆ ಗುರುವಾರ ಬೆಳಗ್ಗೆ ನಡೆದ 'ಸಂಸದರ ವಾರ್'ನಲ್ಲಿ ಬಿಜೆಪಿಯ ಇಬ್ಬರು ಸಂಸದರ ತಲೆಗೆ ಗಾಯವಾಗಿದೆ. ಅವರನ್ನು ಇಲ್ಲಿನ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಒಡಿಶಾದ ಪ್ರತಾಪ್ ಸಾರಂಗಿ (69) ಮತ್ತು ಉತ್ತರ ಪ್ರದೇಶದ ಮುಖೇಶ್ ರಜಪೂತ್ ಗಾಯಗೊಂಡ ಬಿಜೆಪಿ ಸಂಸದರು. ಅವರ ತಲೆಗೆ ಪೆಟ್ಟಾಗಿದೆ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರ್ಎಂಎಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅಜಯ್ ಶುಕ್ಲಾ ತಿಳಿಸಿದ್ದಾರೆ.
"ಸಾರಂಗಿ ಅವರ ಹಣೆಯ ಎಡಭಾಗಕ್ಕೆ ಗಾಯವಾಗಿ, ರಕ್ತಸ್ರಾವವಾಗಿದೆ. ಗಾಯಕ್ಕೆ ಹೊಲಿಗೆ ಹಾಕಲಾಗಿದೆ. ಆಸ್ಪತ್ರೆಗೆ ಕರೆತರುವಾಗ ಅವರ ರಕ್ತದೊತ್ತಡವು ತೀವ್ರ ಮಟ್ಟದಲ್ಲಿ ಕಡಿಮೆಯಾಗಿ ಆತಂಕ ಮೂಡಿಸಿತ್ತು. ತಲೆಯ ಸಿಟಿ ಸ್ಕ್ಯಾನ್ ಮತ್ತು ಹೃದಯ ಪರೀಕ್ಷೆ ನಡೆಸಲಾಗಿದೆ. ಇಬ್ಬರೂ ಸಂಸದರಿಗೆ ರಕ್ತದೊತ್ತಡ, ನೋವು ಮತ್ತು ಆತಂಕ ತಗ್ಗಲು ಔಷಧಿ ನೀಡಲಾಗಿದೆ. ಇಬ್ಬರೂ ಐಸಿಯುನಲ್ಲಿದ್ದಾರೆ. ಆರೋಗ್ಯ ಸ್ಥಿರ ಬರುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ" ಎಂದು ವೈದ್ಯರು ಮಾಹಿತಿ ನೀಡಿದರು.
ಆರೋಗ್ಯ ವಿಚಾರಿಸಿದ ಪ್ರಧಾನಿ, ಸಚಿವರು:ಪ್ರತಿಭಟನೆಯ ತಿಕ್ಕಾಟದ ವೇಳೆ ಗಾಯಗೊಂಡು ಆಸ್ಪತ್ರೆ ಸೇರಿರುವ ಸಂಸದರ ಆರೋಗ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಚಾರಿಸಿದ್ದಾರೆ. ಗಾಯಾಳು ನಾಯಕರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಸೂಚನೆ ನೀಡಿದ್ದಾರೆ. ಇದೇ ವೇಳೆ, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಲ್ಹಾದ್ ಜೋಶಿ ಅವರು ಆರ್ಎಂಎಲ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಸಂಸದರ ಆರೋಗ್ಯ ವಿಚಾರಿಸಿದರು.
ರಾಹುಲ್ ಗಾಂಧಿ ವಿರುದ್ಧ ಆರೋಪ:ಸಂಸದರ ನಡುವಿನ ಘರ್ಷಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಹಿರಿಯ ಸಂಸದರನ್ನು ವಿಪಕ್ಷ ನಾಯಕ ಬಲವಾಗಿ ತಳ್ಳಿದರು. ಹೀಗಾಗಿ ನೆಲಕ್ಕೆ ಬಿದ್ದು ಗಾಯವಾಯಿತು ಎಂದು ಸಂಸದ ಪ್ರತಾಪ್ ಸಾರಂಗಿ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ತಲೆಗೆ ಗಾಯವಾಗಿ ರಕ್ತಸ್ರಾವವಾಗುತ್ತಿದ್ದುದು ಕಂಡುಬಂತು.
ರಾಹುಲ್ ಗಾಂಧಿಯಿಂದ ಗೂಂಡಾಗಿರಿ:ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು, ವಿಪಕ್ಷ ನಾಯಕನ ವಿರುದ್ಧ ಕಿಡಿಕಾರಿದ್ದಾರೆ. ರಾಹುಲ್ ಗಾಂಧಿ ಅವರದ್ದು ಗೂಂಡಾ ವರ್ತನೆಯಾಗಿದೆ. ಹಿರಿಯ ಸಂಸದರನ್ನು ತಳ್ಳಿ ಗಾಯಗೊಳಿಸಿದ್ದಾರೆ. ಇದು, ಹಿರಿಯರ ಜೊತೆ ನಡೆದುಕೊಳ್ಳುವ ರೀತಿಯೇ ಎಂದು ಪ್ರಶ್ನಿಸಿದ್ದಾರೆ.
ನನ್ನ ಮೇಲೆ ಹಲ್ಲೆ- ಖರ್ಗೆ:ಇದೇ ವೇಳೆ ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಆರೋಪಿಸಿದ್ದಾರೆ. ಇದರ ವಿರುದ್ಧ ಕ್ರಮ ಜರುಗಿಸಿ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಬಳಿಕ ಸ್ಪೀಕರ್ ಅವರನ್ನು ಭೇಟಿ ಮಾಡಿ, ಬಿಜೆಪಿ ಸಂಸದರ ಅಶಿಸ್ತಿನ ವರ್ತನೆ ಮತ್ತು ಹಲ್ಲೆಯನ್ನು ಖಂಡಿಸಿದ್ದಾರೆ.
ಲೋಕಸಭೆ ಸ್ಪೀಕರ್‌ಗೆ ಪತ್ರ ಬರೆದಿರುವ ಕಾಂಗ್ರೆಸ್ ಅಧ್ಯಕ್ಷ, ಬಿಜೆಪಿ ಸಂಸದರು ತಮ್ಮನ್ನು ತಳ್ಳಿದ್ದರಿಂದ, ನಿಯಂತ್ರಣ ಕಳೆದುಕೊಂಡು ನೆಲದ ಮೇಲೆ ಬಿದ್ದೆ. ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮೊಣಕಾಲುಗಳಿಗೆ ಗಾಯವಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:'ರಾಹುಲ್ ಗಾಂಧಿ ನನ್ನ ಜೊತೆ ಅನುಚಿತವಾಗಿ ವರ್ತಿಸಿದರು'- ಬಿಜೆಪಿ ಸಂಸದೆ; ಪೊಲೀಸರಿಗೆ ದೂರು-ಪ್ರತಿದೂರು