ಕರ್ನಾಟಕ

karnataka

ETV Bharat / bharat

ಟಿಎಂಸಿ ವಿರುದ್ಧ ಜಾಹೀರಾತಿಗೆ ನಿರ್ಬಂಧ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಬಿಜೆಪಿ - BJP TMC Advt Politics - BJP TMC ADVT POLITICS

ತೃಣಮೂಲ ಕಾಂಗ್ರೆಸ್ ವಿರುದ್ಧ ಅವಹೇಳನಕಾರಿ ಜಾಹೀರಾತುಗಳನ್ನು ಪ್ರಕಟಿಸದಂತೆ ಹೈಕೋರ್ಟ್​ ನೀಡಿದ ಆದೇಶ ಪ್ರಶ್ನಿಸಿ ಬಿಜೆಪಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಟಿಎಂಸಿ ವಿರುದ್ಧ ಜಾಹೀರಾತಿಗೆ ನಿರ್ಬಂಧ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಬಿಜೆಪಿ
ಸುಪ್ರೀಂ ಕೋರ್ಟ್ (IANS)

By ETV Bharat Karnataka Team

Published : May 24, 2024, 1:00 PM IST

ನವದೆಹಲಿ: ತೃಣಮೂಲ ಕಾಂಗ್ರೆಸ್ ವಿರುದ್ಧ ಅವಹೇಳನಕಾರಿ ಮತ್ತು ಅಪಮಾನಕರ ಜಾಹೀರಾತುಗಳನ್ನು ಪ್ರಕಟಿಸದಂತೆ ಕಲ್ಕತ್ತಾ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಈ ವಿಷಯವನ್ನು ತುರ್ತಾಗಿ ಪಟ್ಟಿ ಮಾಡುವಂತೆ ನ್ಯಾಯಮೂರ್ತಿ ಬೇಲಾ ಎಂ.ತ್ರಿವೇದಿ ನೇತೃತ್ವದ ರಜಾಕಾಲದ ಪೀಠದ ಮುಂದೆ ಶುಕ್ರವಾರ ಅರ್ಜಿ ಸಲ್ಲಿಸಲಾಗಿದೆ. ಬಿಜೆಪಿಯನ್ನು ಪ್ರತಿನಿಧಿಸುವ ವಕೀಲರ ಸುದೀರ್ಘ ವಾದವನ್ನು ಆಲಿಸಿದ ನಂತರ, ನ್ಯಾಯಮೂರ್ತಿ ಪಂಕಜ್ ಮಿಥಾಲ್ ಅವರನ್ನೂ ಒಳಗೊಂಡ ನ್ಯಾಯಪೀಠವು ಮನವಿಯನ್ನು ಪಟ್ಟಿ ಮಾಡಲು ಪರಿಗಣಿಸುವುದಾಗಿ ಹೇಳಿದೆ.

ತೃಣಮೂಲ ಕಾಂಗ್ರೆಸ್ ಮತ್ತು ಅದರ ಕಾರ್ಯಕರ್ತರ ರಾಜಕೀಯ ಸ್ವಾತಂತ್ರ್ಯಗಳನ್ನು ನೇರವಾಗಿ ಉಲ್ಲಂಘಿಸುವ ಜಾಹೀರಾತುಗಳನ್ನು ಪ್ರಕಟಿಸದಂತೆ ನಿಷೇಧಿಸಿ ಕಲ್ಕತ್ತಾ ಹೈಕೋರ್ಟ್ ಇದೇ ವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸತ್ಯಕ್ಕೆ ದೂರವಾದ ಆರೋಪಗಳು ಅಥವಾ ಮಾಹಿತಿಗಳನ್ನು ತಿರುಚಿ ಅದರ ಆಧಾರದ ಮೇಲೆ ಇತರ ಪಕ್ಷಗಳು ಅಥವಾ ಅವರ ಕಾರ್ಯಕರ್ತರನ್ನು ಟೀಕಿಸುವುದು ಮಾದರಿ ನೀತಿ ಸಂಹಿತೆ (ಎಂಸಿಸಿ)ಯ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್​ನ ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಅವರ ನ್ಯಾಯಪೀಠ ಹೇಳಿದೆ.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನೀಡಿದ ದೂರುಗಳನ್ನು ಸೂಕ್ತ ಸಮಯದಲ್ಲಿ ಪರಿಹರಿಸಲು ಭಾರತದ ಚುನಾವಣಾ ಆಯೋಗವು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅದು ಹೇಳಿದೆ.

"ಅದರಂತೆ, ಪ್ರತಿವಾದಿ ಸಂಖ್ಯೆ 2 (ಬಿಜೆಪಿ) ಈ ಮೂಲಕ ಆಕ್ಷೇಪಾರ್ಹ ಜಾಹೀರಾತುಗಳ ಪ್ರಕಟಣೆಯನ್ನು ಮುಂದುವರಿಸದಂತೆ ನಿರ್ಬಂಧಿಸಲಾಗಿದೆ... ಜೂನ್ 04, 2024 ರವರೆಗೆ ಅಥವಾ ಮುಂದಿನ ಆದೇಶದವರೆಗೆ, ಯಾವುದು ಮೊದಲೋ ಅದು. ಮೇಲೆ ತಿಳಿಸಿದ ಅವಧಿಯಲ್ಲಿ ಇಸಿಐ ಹೊರಡಿಸಿದ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವ ಜಾಹೀರಾತುಗಳನ್ನು ಯಾವುದೇ ರೀತಿಯ ಮಾಧ್ಯಮಗಳಲ್ಲಿ ಪ್ರಕಟಿಸದಂತೆ ಪ್ರತಿವಾದಿ ಸಂಖ್ಯೆ 2 ಅನ್ನು ನಿರ್ಬಂಧಿಸಲಾಗಿದೆ" ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

'ಸನಾತನ ವಿರೋಧಿ ತೃಣಮೂಲ' (ತೃಣಮೂಲ ಕಾಂಗ್ರೆಸ್ ಸನಾತನ ಧರ್ಮದ ವಿರೋಧಿಯಾಗಿದೆ) ಎಂಬ ಜಾಹೀರಾತನ್ನು ಉಲ್ಲೇಖಿಸಿದ ಟಿಎಂಸಿಯನ್ನು ಪ್ರತಿನಿಧಿಸುವ ವಕೀಲರು, ಜಾತಿ, ಧರ್ಮ ಇತ್ಯಾದಿಗಳ ಆಧಾರದ ಮೇಲೆ ಸುದ್ದಿ ಲೇಖನಗಳ ಸೋಗಿನಲ್ಲಿ ಜಾಹೀರಾತು ಪ್ರಕಟಿಸುವುದು ನೀತಿ ಸಂಹಿತೆಗೆ ವಿರುದ್ಧವಾಗಿವೆ ಎಂದು ವಾದಿಸಿದ್ದರು. ಪ್ರತಿ ಬಾರಿ ಇಂಥ ಜಾಹೀರಾತು ಪ್ರಕಟಿಸಿದಾಗ ಟಿಎಂಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಕೀಲರು ನ್ಯಾಯಾಲಯದ ಗಮನ ಸೆಳೆದಿದ್ದರು.

ಇದನ್ನೂ ಓದಿ : ಕಿರಿಯ ವೈದ್ಯೆಗೆ ಲೈಂಗಿಕ ಕಿರುಕುಳ: ಆಸ್ಪತ್ರೆಯ 3ನೇ ಮಹಡಿಗೆ ಜೀಪ್ ನುಗ್ಗಿಸಿ ವೈದ್ಯನ ಬಂಧಿಸಿದ ಪೊಲೀಸರು! - AIIMS Rishikesh

ABOUT THE AUTHOR

...view details