ಪಂಚಕುಲ: ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ಇಂದು ಬಿಜೆಪಿ ನಾಯಕ ನಯಾಬ್ ಸಿಂಗ್ ಸೈನಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ರಾಜನಾಥ್ ಸಿಂಗ್ ಮತ್ತು ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟದ ಎಲ್ಲಾ 20 ಮುಖ್ಯಮಂತ್ರಿಗಳು ಮತ್ತು ಅವರ ನಿಯೋಗಗಳು ಕೂಡ ಇಂದಿನ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ ಪ್ರಮಾಣ ವಚನ ಬೋಧಿಸಲಿದ್ದಾರೆ. ಪಂಚಕುಲದ ಸೆಕ್ಟರ್ 5ರ ಪರೇಡ್ ಗ್ರೌಂಡ್‌ನಲ್ಲಿ ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಸುಮಾರು 50,000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಜನರಿಗೆ ಕಾರ್ಯಕ್ರಮ ವೀಕ್ಷಿಸಲು ಮೈದಾನದ ಸುತ್ತ 14 ಎಲ್ಇಡಿ ಪರದೆಯ ವ್ಯವಸ್ಥೆ ಮಾಡಲಾಗಿದೆ. ಸೈನಿ ಅವರು ಜೊತೆ ಯಾವ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ಕುರಿತು ಇನ್ನು ತಿಳಿದು ಬಂದಿಲ್ಲ.
ಎನ್ಡಿಎ ರಾಜ್ಯಗಳ ಸಿಎಂಗಳ ಜೊತೆ ಮೋದಿ ಮಹತ್ವದ ಸಭೆ:ಪ್ರಮಾಣವಚನದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಚಂಡೀಗಢದಲ್ಲಿ ಅರ್ಧದಿನದ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಎನ್ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಹಾಜರಿರಲಿದ್ದಾರೆ.