ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದು ಬುಧವಾರ ತಡರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪ್ರಕಾರ 96 ವರ್ಷದ ಅಡ್ವಾಣಿ ವಯೋಸಹಜ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, ಅವರನ್ನು ಜೆರಿಯಾಟ್ರಿಕ್ ವಿಭಾಗದಲ್ಲಿ ನಿಗಾದಲ್ಲಿ ಇರಿಸಲಾಗಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಅಡ್ವಾಣಿಯವರಿಗೆ ಈ ವರ್ಷ ಮಾರ್ಚ್ ತಿಂಗಳಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಿ ಗೌರವಿಸಲಾಗಿತ್ತು. ಆರೋಗ್ಯದ ಕಾರಣದಿಂದ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗದೇ ಇದ್ದಿದ್ದರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಸ್ವತಃ ಅಡ್ವಾಣಿ ಅವರ ನಿವಾಸಕ್ಕೆ ಭೇಟಿ ನೀಡಿ ಭಾರತ ರತ್ನ ನೀಡಿ ಗೌರವಿಸಿದ್ದರು.
ಅಡ್ವಾಣಿ ಹಿನ್ನೆಲೆ:ನವೆಂಬರ್ 8, 1927 ರಂದು ಕರಾಚಿಯಲ್ಲಿ (ಇಂದಿನ ಪಾಕಿಸ್ತಾನ) ಜನಿಸಿದ ಅಡ್ವಾಣಿ ಅವರು ಭಾರತ ವಿಭಜನೆ ಸಮಯದಲ್ಲಿ ಮುಂಬೈಗೆ ಬಂದು ನೆಲೆಸಿದ್ದರು ಮತ್ತು ಅಲ್ಲಿಯೇ ಶಿಕ್ಷಣವನ್ನು ಪಡೆದಿದ್ದರು. ಬಳಿಕ 1942ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ ಸ್ವಯಂಸೇವಕರಾಗಿ ಆರ್‌ಎಸ್‌ಎಸ್‌ಗೆ ಸೇರಿದರು.