ದೆಹಲಿ/ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ ಹಾಗೂ ಮುಡಾ ಹಗರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐಗೆ) ವಹಿಸುವಂತೆ ಆಗ್ರಹಿಸಿ ಸಂಸತ್ ಭವನದ ಆವರಣದಲ್ಲಿ ಇಂದು ಬಿಜೆಪಿ-ಜೆಡಿಎಸ್ ಸಂಸದರು ಪ್ರತಿಭಟನೆ ನಡೆಸಿದ್ದು, ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿದರು.
ಕರ್ನಾಟಕದ ಆಡಳಿತರೂಢ ಕಾಂಗ್ರೆಸ್ ಪಕ್ಷವು ವಾಲ್ಮೀಕಿ ನಿಗಮದ ಹಣ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಎಸಗಿದೆ. ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ (ಮುಡಾ) ಖಾಲಿ ನಿವೇಶನಗಳನ್ನು ಕಾನೂನಾತ್ಮಕವಾಗಿ ಹರಾಜು ಮಾಡದೇ ಭ್ರಷ್ಟಾಚಾರ ಮಾಡಿದೆ ಎಂದು ಆರೋಪಿಸಿ ರಾಜ್ಯದಿಂದ ಆಯ್ಕೆಗೊಂಡ ಬಿಜೆಪಿ-ಜೆಡಿಎಸ್ ಸಂಸದರು ದೆಹಲಿಯಲ್ಲಿ ಪ್ರತಿಭಟಿಸಿದರು. ಸಂಸತ್ ಭವನದ ಆವರಣದಲ್ಲಿ ಭಿತ್ತಿಪತ್ರಗಳ ಪ್ರದರ್ಶಿಸಿ ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿದರು.
''ಕರ್ನಾಟಕದ ದಲಿತರ ಹಣವನ್ನು ಕಾಂಗ್ರೆಸ್ ಪಕ್ಷ ಲೂಟಿ ಮಾಡುತ್ತಿದೆ; ರಾಹುಲ್ ಗಾಂಧಿ ಎಲ್ಲಿದ್ದಾರೆ ಎಲ್ಲಿದ್ದಾರೆ'' ಎಂಬರ್ಥವುಳ್ಳ ಹಿಂದಿ ಘೋಷಣೆಗಳನ್ನು ಕೂಗಿದರು. ''ಹಠಾವೋ, ಹಠಾವೋ ಭ್ರಷ್ಟ ಮುಖ್ಯಮಂತ್ರಿ ಕೋ ಹಠಾವೋ'' ಎಂಬ ಘೋಷಣೆ ಕೂಗಿದರು. ''ರಿಟರ್ನ್ ದಿ ಲೂಟೆಡ್ ಮನಿ ಬಿಲಾಂಗಿಂಗ್ ಟು ಎಸ್‍ಟಿ ಕಮ್ಯುನಿಟಿ'', ಮುಡಾ ಹಗರಣದಲ್ಲಿ ಕೋಟಿ ಕೋಟಿ ನುಂಗಿದ ಸಿದ್ದರಾಮಯ್ಯನವರಿಗೆ ಧಿಕ್ಕಾರ ಎಂಬಂತಹ ಪ್ಲಕಾರ್ಡ್ ಹಿಡಿದು ಸಂಸದರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.